"ನೀವಿನ್ನು ಹೆಚ್ಚು ಕಾಲ ಇರುವುದಿಲ್ಲ"

Update: 2017-09-24 14:35 GMT

ಸಿಯೋಲ್/ವಿಶ್ವಸಂಸ್ಥೆ, ಸೆ. 24: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮತ್ತು ವಿದೇಶ ಸಚಿವ ರಿ ಯಾಂಗ್ ಹೊ ‘ಇನ್ನು ಹೆಚ್ಚು ಕಾಲ ಇರುವುದಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಎಚ್ಚರಿಸಿದ್ದಾರೆ.

ಅದೇ ವೇಳೆ, ಉತ್ತರ ಕೊರಿಯದಲ್ಲಿ ಬೃಹತ್ ಅಮೆರಿಕ ವಿರೋಧಿ ಸಭೆಯೊಂದು ನಡೆಯಿತು.

ಶನಿವಾರ ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಕೊರಿಯದ ವಿದೇಶ ಸಚಿವರು, “ಕಿಮ್ ಜಾಂಗ್ ಉನ್‌ರನ್ನು ‘ಆತ್ಮಹತ್ಯಾ ಕಾರ್ಯ’ದಲ್ಲಿ ತೊಡಗಿರುವ ರಾಕೆಟ್ ಮನುಷ್ಯ’ ಎಂಬುದಾಗಿ ‘ಮಿಸ್ಟರ್ ಈವಲ್ ಪ್ರೆಸಿಡೆಂಟ್’ (ಕೆಟ್ಟ ಅಧ್ಯಕ್ಷ) ಬಣ್ಣಿಸಿದ ಬಳಿಕ, ಅಮೆರಿಕದ ಪ್ರಧಾನ ನೆಲದ ಮೇಲೆ ರಾಕೆಟ್‌ಗಳಿಂದ ದಾಳಿ ನಡೆಸುವುದು ಉತ್ತರ ಕೊರಿಯಕ್ಕೆ ಅನಿವಾರ್ಯವಾಗಿದೆ” ಎಂದು ಹೇಳಿದರು.

ಇದಕ್ಕೆ ಶನಿವಾರ ರಾತ್ರಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, ‘‘ಉತ್ತರ ಕೊರಿಯದ ವಿದೇಶ ಸಚಿವರು ವಿಶ್ವಸಂಸ್ಥೆಯಲ್ಲಿ ಮಾತನಾಡುವುದನ್ನು ಈಗಷ್ಟೇ ಕೇಳಿದೆ. ಲಿಟಲ್ ರಾಕೆಟ್ ಮ್ಯಾನ್ (ಕಿಮ್ ಜಾಂಗ್ ಉನ್)ನ ಅಭಿಪ್ರಾಯಗಳನ್ನೇ ಈ ವ್ಯಕ್ತಿಯೂ ಹೊಂದಿರುವುದಾದರೆ, ಅವರು ಹೆಚ್ಚು ಕಾಲ ಇರುವುದಿಲ್ಲ’’ ಎಂದು ಹೇಳಿದರು.

 ಉಭಯ ದೇಶಗಳ ನಡುವಿನ ವಾಕ್ಸಮರ ಹೀಗೆಯೇ ಮುಂದುವರಿದರೆ ಯಾವುದಾದರೂ ಒಂದು ಪಕ್ಷ ತಪ್ಪು ಹೆಜ್ಜೆಯನ್ನು ಇಡುವ ಅಪಾಯ ಅಧಿಕವಾಗಿದೆ ಹಾಗೂ ಅದು ಭಾರೀ ವಿನಾಶಕ್ಕೆ ಕಾರಣವಾಗಬಹುದಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಶುಕ್ರವಾರ ಆಶ್ಚರ್ಯಕರ ರೀತಿಯಲ್ಲಿ ನೇರ ಹೇಳಿಕೆಯೊಂದನ್ನು ನೀಡಿದ ಕಿಮ್, ಟ್ರಂಪ್‌ರನ್ನು ‘ಅಮೆರಿಕದ ಮಾನಸಿಕ ಅಸ್ವಸ್ಥ ಮುದುಕ’ ಎಂಬುದಾಗಿ ಕರೆದಿರುವುದನ್ನು ಸ್ಮರಿಸಬಹುದಾಗಿದೆ.

ಪ್ಯಾಂಗ್‌ಯಾಂಗ್‌ನಲ್ಲಿ ಅಮೆರಿಕ ವಿರೋಧಿ ಪ್ರತಿಭಟನೆ

 ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವೆ ಮಾತಿನ ಸಮರ ನಡೆಯುತ್ತಿರುವಂತೆಯೇ, ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಶನಿವಾರ ಬೃಹತ್ ಅಮೆರಿಕ ವಿರೋಧಿ ಪ್ರತಿಭಟನೆ ನಡೆಯಿತು.

ಪ್ಯಾಂಗ್‌ಯಾಂಗ್‌ನ ದ್ವಿತೀಯ ಕಿಮ್ ಸುಂಗ್ ಚೌಕದಲ್ಲಿ ಭಾರೀ ಸಂಖ್ಯೆಯ ಪ್ರತಿಭಟನಕಾರರು ನೆರೆದರು. ಅಮೆರಿಕ ಮತ್ತು ಅದರ ಅಧ್ಯಕ್ಷರನ್ನು ನಿಂದಿಸಿ ಹಿರಿಯ ಅಧಿಕಾರಿಗಳು ಮಾಡಿದ ಭಾಷಣವನ್ನು ಅವರು ಕೇಳಿದರು.

‘ನಿರ್ಣಾಯಕ ಪ್ರತೀಕಾರ’ ಮತ್ತು ‘ಅಮೆರಿಕನ್ ಸಾಮ್ರಾಜ್ಯಶಾಹಿಗಳಿಗೆ ಮರಣ’ ಎಂಬುದಾಗಿ ಬರೆದಿರುವ ಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.

‘ಸಂಪೂರ್ಣ ವಿನಾಶ’ ಎಂಬ ಘೋಷಣೆಗಳನ್ನು ಅವರು ಕೂಗಿದರು ಎಂದು ಸರಕಾರಿ ಸುದ್ದಿ ಸಂಸ್ಥೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.

ಕಾರ್ಮಿಕರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು ಎಂದು ಅದು ಹೇಳಿದೆ.

ಉತ್ತರ ಕೊರಿಯ ಸಮೀಪ ಅಮೆರಿಕದ ಬಾಂಬರ್ ವಿಮಾನಗಳ ಹಾರಾಟ

ಅಮೆರಿಕ ವಾಯುಪಡೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನಗಳು ಹಾಗೂ ಯುದ್ಧ ವಿಮಾನಗಳು ಶನಿವಾರ ಉತ್ತರ ಕೊರಿಯದ ಪೂರ್ವದ ಜಲಪ್ರದೇಶದ ಮೇಲಿನ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರಾಡಿದವು.

ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಲಭ್ಯವಿರುವ ಸೇನಾ ಆಯ್ಕೆಗಳ ವ್ಯಾಪ್ತಿಯ ಪ್ರದರ್ಶನವಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ.

ಉತ್ತರ ಕೊರಿಯದ ವಿದೇಶ ಸಚಿವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವುದಕ್ಕೆ ಸ್ವಲ್ಪ ಮುಂಚೆ ಈ ಬೆಳವಣಿಗೆ ನಡೆಯಿತು.

ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯಗಳನ್ನು ಪ್ರತ್ಯೇಕಿಸುವ ಸೇನಾಮುಕ್ತ ವಲಯದ ಉತ್ತರದ ಅಂಚಿನಲ್ಲಿ ಅಮೆರಿಕದ ಬಾಂಬರ್ ವಿಮಾನಗಳು ಹಾರಿದವು. ಈ ವಲಯದಲ್ಲಿ ಈವರೆಗೆ ಅಮೆರಿಕದ ಯಾವುದೇ ಬಾಂಬರ್ ವಿಮಾನಗಳಾಗಲೀ, ಯುದ್ಧ ವಿಮಾನಗಳಾಗಲಿ ಹಾರಾಟ ನಡೆಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News