ಕೋಮುವಾದದ ವಿರುದ್ಧ ಧ್ವನಿ ಎತ್ತಿದವರನ್ನು ಕೊಲ್ಲುವಂತಹ ಹೀನ ಕೃತ್ಯವನ್ನು ಸಂಘಪರಿವಾರ ನಡೆಸುತ್ತಿದೆ
ಕಾಸರಗೋಡು, ಸೆ. 24: ಭಾರತದ ಮುಖ್ಯ ಶತ್ರು ಪಾಕಿಸ್ತಾನ ಅಲ್ಲ ಬದಲಾಗಿ, ಬಡತನ ಮತ್ತು ನಿರುದ್ಯೋಗವಾಗಿದ್ದು, ಆಡಳಿತ ಪಕ್ಷವು ಇದನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದು ದೇಶದೊಳಗಿನ ಸಮಸ್ಯೆಗೆ ಸ್ಪಂದಿಸಲು ಆಡಳಿತ ವರ್ಗ ಮುಂದಾಗುತ್ತಿಲ್ಲ ಎಂದು ಜೆ ಎನ್ ಯು ವಿದ್ಯಾರ್ಥಿ ಯೂನಿಯನ್ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅಭಿಪ್ರಾಯಪಟ್ಟರು.
ರವಿವಾರ ಕಾಸರಗೋಡಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕೋಮುವಾದದ ವಿರುದ್ಧ ಹೋರಾಟ ಅಗತ್ಯ. ಕೋಮುವಾದವನ್ನು ಭಾರತದ ನೆಲದಲ್ಲಿ ಬೇರೂರಲು ಬಿಡಬಾರದು. ಮಾಧ್ಯಮ ಮತ್ತು ಬರಹಗಾರರ ಕೊಲೆ ಖಂಡನೀಯ. ಗೌರಿ ಲಂಕೇಶ್ ಕೊಲೆಯ ನೆನಪು ಇನ್ನೂ ಮಾಸಿಲ್ಲ. ಇದರ ಬೆನ್ನಿಗೆ ಪಂಜಾಬ್ ನಲ್ಲಿ ಪತ್ರಕರ್ತ ಮತ್ತು ಆತನ ತಾಯಿಯನ್ನು ಕೊಲೆಗೈದ ಘಟನೆ ನಿನ್ನೆಯಷ್ಟೇ ಬೆಳಕಿಗೆ ಬಂದಿದೆ. ಪನ್ಸಾರೆ, ಕಲ್ಬುರ್ಗಿ ಯವರ ಕೊಲೆ ಕೋಮುವಾದಿ ಶಕ್ತಿಗಳಿಗೆ ಸವಾಲಾಗಿದ್ದಾರೆ ಎಂಬ ಕಾರಣಕ್ಕೆ ನಡೆದಿದೆ ಹೊರತು . ರಾಜಕೀಯ ದ್ವೇಷದ ಕೊಲೆಯಲ್ಲ . ಕೋಮುವಾದದ ಬಗ್ಗೆ ಧ್ವನಿ ಎತ್ತಿದವರನ್ನು ಕೊಲ್ಲುವಂತಹ ಹೀನ ಕೃತ್ಯ ಸಂಘ ಪರಿವಾರ ನಡೆಸುತ್ತಿದೆ. ಕೋಮುವಾದದ ವಿರುದ್ಧ ಹೋರಾಟ ಅನಿವಾರ್ಯ, ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.
ಇಂದು ಬಹುತೇಕ ಯುವಜನರು ನವ ಮಾಧ್ಯಮ ಮತ್ತು ಕೆಲ ಶಕ್ತಿಗಳ ಬಲೆಗೆ ಬೀಳುತ್ತಿದ್ದು ಇದು ದೇಶಕ್ಕೆ ಅಪಾಯದ ಸಂಕೇತವಾಗಿದೆ ಹೊಸ ಮಾಧ್ಯಮಗಳು ನೀಡುತ್ತಿರುವ ಸುಳ್ಳು ಸುದ್ದಿಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಯುವಕರನ್ನು ತಪ್ಪು ಹಾದಿ ಗೆಳೆಯುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಇಂದಿನ ಯುವಜನತೆಗೆ ಸಾಧ್ಯವಾಗಬೇಕು ಎಂದು ಕನ್ಹಯ್ಯ ಕುಮಾರ್ ಅಭಿಪ್ರಾಯಪಟ್ಟರು.
ಕಾಸರಗೋಡಿಗೆ ಆಗಮಿಸಿದ ಕನ್ಹಯ್ಯ ಕುಮಾರ್ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ , ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ , ರಾಜ್ಯ ಸಮಿತಿ ಸದಸ್ಯ ಕೆ.ವಿ. ಕೃಷ್ಣನ್ , ಟಿ. ಕೃಷ್ಣನ್, ಪ್ರಭಾಕರ ರಾವ್, ರಾಧಾಕೃಷ್ಣ ಪೆರುoಬಲ, ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸಿ. ಎಚ್ ಕುಞoಬು ಮೊದಲಾದವರು ಬರಮಾಡಿಕೊಂಡರು.
ಕಾಸರಗೋಡು ಹೊಸಬಸ್ಸು ನಿಲ್ದಾಣ ಪರಿಸರದಿಂದ ಬೈಕ್ ರ್ಯಾಲಿ ಜೊತೆ ಕನ್ಹಯ್ಯ ಕುಮಾರ್ ರನ್ನು ಕಾಞ೦ಗಾಡ್
ಕೊಟ್ಟಚ್ಚೇರಿಗೆ ಬರಮಾಡಿಕೊಳ್ಳಲಾಯಿತು. ಕನ್ಹಯ್ಯ ಕುಮಾರ್ ಭೇಟಿ ಹಿನ್ನಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.