10 ವರ್ಷಗಳಲ್ಲಿ 1.60 ಲಕ್ಷ ಕುಟುಂಬಗಳಿಗೆ ಆರೋಗ್ಯ ಕಾರ್ಡ್: ಜಿ.ಶಂಕರ್
ಉಡುಪಿ, ಸೆ.24: ಕಳೆದ 10ವರ್ಷಗಳ ಅವಧಿಯಲ್ಲಿ 1.60 ಲಕ್ಷ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಈವರೆಗೆ ಒಟ್ಟು 8 ಲಕ್ಷ ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ತಿಳಿಸಿದ್ದಾರೆ.
ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವ ಸಂಘ ಟನೆ ನೇತೃತ್ವದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಇಂದು ನಡೆದ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಈ ವರ್ಷ 25932 ಕುಟುಂಬಗಳ 1.30ಲಕ್ಷ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಅಲ್ಲದೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸೌಲಭ್ಯದಲ್ಲಿ 25 ಸಾವಿರ ರೂ.ಗೆ ಏರಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮಂಗಳೂರಿನ ಕೆಎಂಸಿ ಮೂಲಕವೂ ಅಲ್ಲಿನ ಜನರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಉದ್ದೇಶ ವನ್ನು ಹೊಂದಲಾಗಿದೆ. ಯಕ್ಷಗಾನ ಕಲಾವಿದರು, ಪೊಲೀಸ್ ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸರಿಗೂ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂದರು.
ಸಾಂಕೇತಿಕವಾಗಿ ಕಾರ್ಡ್ ವಿತರಿಸಿದ ಮಣಿಪಾಲ ವಿವಿಯ ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ಮಾತನಾಡಿ, ಆರೋಗ್ಯ ಕಾರ್ಡ್ ಎಂಬುದು ಮಳೆ ಬರುವಾಗ ಬಳಸುವ ಕೊಡೆ ಇದ್ದಂತೆ. ನಮ್ಮ ಆರೋಗ್ಯ ಯಾವುದೇ ಸಂದರ್ಭದಲ್ಲೂ ಹದಗೆಡಬಹುದು. ಅಂತಹ ಸಂದರ್ಭದಲ್ಲಿ ಈ ಕಾರ್ಡ್‌ಗಳು ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ಆರೋಗ್ಯ ಕಾರ್ಡ್‌ಗಳಿಗಾಗಿ ಮಣಿಪಾಲ ವಿವಿಯು 5 ಕೋಟಿ ರೂ. ವ್ಯಯ ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ವಹಿಸಿದ್ದರು. ಮಾಜಿ ಅಧ್ಯಕ್ಷ ಜಯ ಸಿ.ಕೋಟ ಸ್ವಾಗತಿಸಿದರು. ಟ್ರಸ್ಟ್‌ನ ಸದಸ್ಯ ಶಂಕರ್ ಸಾಲ್ಯಾನ್ ವಂದಿಸಿದರು. ಅಶೋಕ್ ತೆ್ಕಟ್ಟೆ ಕಾರ್ಯ ಕ್ರಮ ನಿರೂಪಿಸಿದರು.