'ಹೇಳದೆ ಕೆಲ ಮಾಡುವುದು ಸಿದ್ದು ಸರಕಾರ; ಹೇಳಿಯೂ ಮಾಡದಿರುವುದು ಮೋದಿ ಸರಕಾರ'
ಉಡುಪಿ, ಸೆ. 24: ರಾಜ್ಯ ಸರಕಾರ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ 165 ಭರವಸೆಗಳ ಪೈಕಿ 159ನ್ನು ಈಡೇರಿಸಿದೆ. ಇದರೊಂದಿಗೆ ಪ್ರಣಾಳಿಕೆಯಲ್ಲಿ ಇಲ್ಲದ ರೈತರ ಸಾಲ ಮನ್ನಾದಂಥ ಕೊಡುಗೆಯನ್ನು ನೀಡಿದೆ. ಹೀಗೆ ರಾಜ್ಯದ ಸಿದ್ದರಾಮಯ್ಯರದ್ದು ಮಾತನಾಡದೇ ಕೆಲಸ ಮಾಡುವ ಸರಕಾರವಾದರೆ, ಕೇಂದ್ರದ ನರೇಂದ್ರ ಮೋದಿಯವರದು ದೊಡ್ಡ ದೊಡ್ಡ ಮಾತನಾಡಿ ಯಾವುದೇ ಕೆಲಸ ಮಾಡದ ಸರಕಾರವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಲಯ ಉಸ್ತುವಾರಿ ವಿಷ್ಣುನಾಥನ್ ಲೇವಡಿ ಮಾಡಿದ್ದಾರೆ.
ರವಿವಾರ ನಗರದ ಮಿಷನ್ ಕಂಪೌಂಡ್‌ನ ಬಾಷಲ್ ಮಿಷನರೀಸ್ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಲಾದ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು. ಕನ್ನಡದ ನುಡಿಗಟ್ಟೊಂದರಂತೆ ಆಡದೇ ಮಾಡುವವನು ರೂಢಿಯೊಳಗೆ ಉತ್ತಮನಾದರೆ, ಆಡಿಯೂ ಮಾಡದವರು ಅಧಮ ಎಂಬುದನ್ನು ಜನ ಅರಿತಿದ್ದಾರೆ ಎಂದರು.
ಸಿದ್ದರಾಮಯ್ಯ ಸರಕಾರ ನುಡಿದಂತೆ ನಡೆದರೆ, ಮೋದಿ ಚುನಾವಣೆ ವೇಳೆ ನುಡಿದ ಒಂದೇ ಒಂದು ಮಾತನ್ನು ಉಳಿಸಿಕೊಳ್ಳಲಾರದೇ ಹೋದರು. ಇದೇ ರಾಜ್ಯದ ಸಿದ್ದರಾಮಯ್ಯ ಸರಕಾರ ಹಾಗೂ ಕೇಂದ್ರದ ನರೇಂದ್ರ ಮೋದಿ ಸಕಾರಕ್ಕಿರುವ ವ್ಯತ್ಯಾಸ ಎಂದರು.
ನಾವೀಗ ನಮ್ಮ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕಿದೆ. ಅಲ್ಲದೇ ಪ್ರತಿಪಕ್ಷಗಳ ಅಪಪ್ರಚಾರಕ್ಕೆ ತಕ್ಕ ಉತ್ತರವನ್ನು ನೀಡಬೇಕಿದೆ. ಕರ್ನಾಟಕ ಬಸವಣ್ಣನವರ ನಾಡು, ಇಲ್ಲಿ ಬಿಜೆಪಿಯವರ ಕೋಮು ಹುನ್ನಾರ ಯಶಸ್ಸು ಕಾಣದು ಎಂಬ ವಿಶ್ವಾಸ ನಮಗಿದೆ ಎಂದು ವಿಷ್ಣುನಾಥನ್ ನುಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸೂಚನೆಯಂತೆ ನಾವು ಬೂತ್ ಮಟ್ಟಕ್ಕೆ ಹೋಗಿ ಜನರನ್ನು ಭೇಟಿಯಾಗಿ, ಸಭೆ ನಡೆಸಿ ಚುನಾವಣೆಗೆ ಸಿದ್ಧತೆ ನಡೆಸಬೇಕಾಗಿದೆ. ಈಗಾಗಲೇ 40 ಕ್ಷೇತ್ರ ಮಟ್ಟದ ಸಭೆಯನ್ನು ನಡೆಸಲಾಗಿದೆ ಎಂದರು.