ಬೇಡಿಕೆಗಳ ಈಡೇರಿಕೆಗೆ ಗ್ರಾಮ ಕರಣಿಕರ ಧರಣಿ

Update: 2017-09-24 16:10 GMT

ಉಡುಪಿ, ಸೆ.24: ಬಹುಕಾಲದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಒಂದು ದಿನದ ಸಾಂಕೇತಿಕ ಮುಷ್ಕರ  ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು.

ಗ್ರಾಮ ಲೆಕ್ಕಾಧಿಕಾರಿಗಳ ಪದೋನ್ನತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು, ಅನ್ಯ ಇಲಾಖೆಯ ಕೆಲಸ ಕಾರ್ಯಗಳನ್ನು ತಮಗೆ ವಹಿಸ ಬಾರದು, ಜಾಬ್‌ಚಾರ್ಟ್‌ನ್ನು ಜಾರಿಗೊಳಿಸಬೇಕು, ಸಕಾಲ ರ್ಯಾಂಕಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಿರತರು ಆಗ್ರಹಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳು, ಸೇವಾ ನಿಯಮ ದಿಂದಾದ ಅನ್ಯಾಯಗಳು ಹಾಗೂ ಕ್ಷೇತ್ರ ಕಾರ್ಯಗಳಲ್ಲಾಗುವ ತೊಂದರೆಗಳು ಮತ್ತು ತಂತ್ರಾಶಗಳಿಂದ ತಮ್ಮ ಮೇಲಾಗುತ್ತಿರುವ ಮಾನಸಿಕ ಒತ್ತಡಗಳನ್ನು ನಿವಾರಿಸುವಂತೆ ಸಂಘದ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಗಾಗಲೇ ಹಲವು ಬಾರಿ ಕಂದಾಯ ಇಲಾಖೆಗೆ ಮನವಿ ರೂಪದಲ್ಲಿ ಅರ್ಪಿಸಲಾಗಿದೆ. ಆದರೆ ಇದುವರೆಗೂ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬರದೇ ನಮಗೆ ನಿರಾಶೆಯಾಗಿದೆ.

ಈ ನಡುವೆ ವಿವಿಧ ಇಲಾಖೆಗಳ ತಾಂತ್ರಿಕ ಕೆಲಸಗಳನ್ನು ತಾಂತ್ರಿಕೇತರ ಸಿಬ್ಬಂದಿಗಳಾದ ಗ್ರಾಮಲೆಕ್ಕಿಗರು ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮಾನಸಿಕ ಒತ್ತಡ ಹೇರಲಾಗುತ್ತಿದೆ.ಇದನ್ನು ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದೆ ಎಂದು ಧರಣಿ ನಿರತರು ತಿಳಿಸಿದರು.
ಸಂಘದ ಬೇಡಿಕೆಗಳು ಸರಕಾರಕ್ಕೆ ಯಾವುದೇ ಆರ್ಥಿಕ ಹೊರೆಯುಂಟು ಮಾಡದ ಹಿನ್ನೆಲೆಯಲ್ಲಿ ಕೂಡಲೇ ಸರಕಾರ ಗ್ರಾಮ ಲೆಕ್ಕಾಧಿಕಾರಿಗಳ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿ ನ್ಯಾಯದೊರಕಿಸಿಕೊಡಬೇಕೆಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಗೆ ಅರ್ಪಿಸಿದ ಮನವಿಯಲ್ಲಿ ವಿನಂತಿಸಲಾಗಿದೆ.

ಮಣಿಪಾಲದಲ್ಲಿ ನಡೆದ ಧರಣಿಯಲ್ಲಿ ಗ್ರಾಮ ಕರಣಿಕರಾದ ಬಸವ ಮೊಗವೀರ, ಮಂಜುನಾಥ ಎಚ್.ಆರ್., ಆನಂದ, ಪುನೀತ್, ಮಾಳಪ್ಪ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News