ಹೆಜಮಾಡಿ ಬಂದರಿಗೆ ಅನುದಾನದ ದಾಖಲೆ ಬಹಿರಂಗ ಪಡಿಸಿ: ಶಾಸಕ ವಿನಯಕುಮಾರ್ ಸೊರಕೆಗೆ ಯಶ್ಪಾಲ್ ಸುವರ್ಣ ಸವಾಲು

Update: 2017-09-24 16:16 GMT

ಉಡುಪಿ, ಸೆ.24: ಹೆಜಮಾಡಿ ಭಾಗದ ಮೀನುಗಾರರ ಬಹುಕಾಲದ ಬೇಡಿಕೆಯಾಗಿರುವ ಬಂದರು ಅಭಿವೃದ್ಧಿಯ ಬಗ್ಗೆ ಇಷ್ಟು ಕಾಲ ಸುಮ್ಮನಿದ್ದು ಇದೀಗ ಸುಳ್ಳು ಭರವಸೆ ನೀಡುವ ಮೂಲಕ ಜನರನ್ನು ವಂಚಿಸುವ ಪ್ರಯತ್ನವನ್ನು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶಿರ್ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಇಷ್ಟು ದಿನ ಸುಮ್ಮನಿದ್ದ ಸೊರಕೆ, ಈಗ ನಿದ್ರೆಯಿಂದ ಎಚ್ಚೆತ್ತವರಂತೆ ಹೆಜಮಾಡಿ ಬಂದರು ಅಭಿವೃದ್ಧಿಯ ಬಗ್ಗೆ ಹೇಳಿಕೆ ನೀಡುತಿದ್ದಾರೆ. ಮುಖ್ಯಮಂತ್ರಿ ಯವರೇ ಬಂದು ಶಂಕುಸ್ಥಾಪನೆ ಮಾಡಲಿದ್ದಾರೆ ಎನ್ನುತಿದ್ದಾರೆ. ಅದರೆ ಸಿದ್ದರಾಮಯ್ಯ ಸರಕಾರ ಈವರೆಗೆ ಮಂಡಿಸಿದ ಬಜೆಟ್‌ಗಳಲ್ಲಿ ಈ ಯೋಜನೆಗೆ ಒಂದು ರೂ.ಯನ್ನೂ ಇಟ್ಟಿಲ್ಲ. ಅನುದಾನವನ್ನು ನೀಡದೇ ಶಂಕುಸ್ಥಾಪನೆ ಮಾಡಿ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದ್ದಾರೆ ಎಂದವರು ದೂರಿದ್ದಾರೆ.

ಹೆಜಮಾಡಿ ಬಂದರು ಅಭಿವೃದ್ಧಿಯ ಬಗ್ಗೆ ಜಿಲ್ಲೆಯ ಮೀನುಗಾರ ಮುಖಂಡರ ನಿಯೋಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ನೀಡಿದೆ. ಸಾಗರಮಾಲಾ ಯೋಜನೆಯಡಿ ಶೇ.50 ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಒಂದು ವೇಳೆ ಸೊರಕೆ ನಿಜಕ್ಕೂ ಹೆಜಮಾಡಿ ಬಂದರು ಅಭಿವೃದ್ಧಿಗೆ ಮುಂದಾಗಿರುವುದು ಸತ್ಯವಾದರೆ ಅದಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ದಾಖಲೆ ಬಹಿರಂಗಪಡಿಸಬೇಕು ಎಂದು ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News