ವಂಶ ಪಾರಂಪರ್ಯ ರಾಜಕೀಯ ಕುರಿತು ಹೇಳಿಕೆಗಾಗಿ ರಾಹುಲ್‌ಗೆ ಶಾ ತೀವ್ರ ತರಾಟೆ

Update: 2017-09-25 13:47 GMT

ಹೊಸದಿಲ್ಲಿ,ಸೆ.25: ಸೋಮವಾರ ಇಲ್ಲಿ ಆರಂಭಗೊಂಡ ಬಿಜೆಪಿಯ ವಿಸ್ತರಿತ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿದ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಇತ್ತೀಚಿನ ಅಮೆರಿಕ ಭೇಟಿ ಸಂದರ್ಭದಲ್ಲಿ ವಂಶ ಪಾರಂಪರ್ಯ ರಾಜಕೀಯ ಕುರಿತು ಹೇಳಿಕೆಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ತೀವ್ರ ತರಾಟೆಗೆತ್ತಿಕೊಂಡರಲ್ಲದೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರ ದಾಳಿಗಳನ್ನು ಪ್ರಶ್ನಿಸಿದರು.

ಶಾ ಅವರ ಭಾಷಣದ ವಿವರಗಳನ್ನು ಸುದ್ದಿಗಾರರಿಗೆ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಎಡರಂಗ ಆಡಳಿತದ ಕೇರಳದಲ್ಲಿ ‘ಹಿಂಸಾತ್ಮಕ ರಾಜಕೀಯ’ದ ವಿರುದ್ಧ ಆಕ್ರಮಣಶೀಲ ನಿಲುವು ತಳೆಯುವ ಬಿಜೆಪಿಯ ಯೋಜನೆ ಯನ್ನು ಪಕ್ಷಾಧ್ಯಕ್ಷರು ಪ್ರಕಟಿಸಿದರು ಎಂದು ತಿಳಿಸಿದರು. ಬಿಜೆಪಿಯು ಅ.3ರಿಂದ 17ರವರೆಗೆ ಕೇರಳದಲ್ಲಿ ಹಿಂಸಾತ್ಮಕ ರಾಜಕೀಯ ವಿರುದ್ಧ ನಡೆಸಲಿರುವ ಅಭಿಯಾನದಲ್ಲಿ ಬಿಜೆಪಿಯ ಎಲ್ಲ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಶಾ ಅವರು ರಾಹುಲ್ ವಿರುದ್ಧ ದಾಳಿ ನಡೆಸಿ, ಮೋದಿ ಮತ್ತು ಅವರ ಅಭವೃದ್ಧಿಯ ಬಗ್ಗೆ ರಾಹುಲ್ ಟೀಕೆಗೆ ವಾಸ್ತವಾಂಶಗಳ ಸಹಿತ ತಕ್ಕ ಉತ್ತರ ನೀಡಿದರು. ಬಡವರ ಪರ ಸಾಮಾಜಿಕ ಯೋಜನೆಗಳಿಂದ 60 ಕೋ.ಬಡಜನರಿಗೆ ನೇರ ಲಾಭಗಳು ತಲುಪಿವೆ ಎಂದು ತಿಳಿಸಿದರು.

   ವಂಶ ಪಾರಂಪರ್ಯ ರಾಜಕೀಯ ಕುರಿತು ರಾಹುಲ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಶಾ, ಬಿಜೆಪಿಯಲ್ಲಿ ಉತ್ತಮ ಆಡಳಿತ ಮತ್ತು ಸಾಧನೆಯ ರಾಜಕೀಯವು ಅದರ ನಾಯಕರನ್ನು ಎತ್ತರಕ್ಕೇರಲು ನೆರವಾಗುತ್ತದೆ ಎಂದರು. ತುಷ್ಟೀಕರಣ ರಾಜಕೀಯಕ್ಕಾಗಿ ರಾಹುಲ್‌ರನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿಯು ತುಷ್ಟೀಕರಣ ರಾಜಕೀಯ ಮತ್ತು ವಂಶ ಪಾರಂಪರ್ಯ ರಾಜಕೀಯವನ್ನು ತಿರಸ್ಕರಿಸುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದರು ಎಂದು ಗೋಯಲ್ ಹೇಳಿದರು.

ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಜಾತಿವಾದ ಮತ್ತು ತುಷ್ಟೀಕರಣದ ರಾಜಕೀಯದಿಂದ ಮುಕ್ತ ಭಾರತಕ್ಕಾಗಿ ಬಿಜೆಪಿಯು ಶ್ರಮಿಸಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಬಿಜೆಪಿಯ ನಾಯಕರೇಕೆ ರಾಹುಲ್ ಹೇಳಿಕೆಗಳ ಹಿಂದೆ ಬಿದ್ದಿದ್ದಾರೆ ಎಂಬ ಪ್ರಶ್ನೆಗೆ ಗೋಯಲ್, ಅವರ ನಾಯಕತ್ವ ನಮಗೆ ಆಸಕ್ತಿಯ ವಿಷಯವಾಗಿದೆ. ರಾಹುಲ್ ರಾಜಕೀಯದಲ್ಲಿ ಇದ್ದಷ್ಟು ಕಾಲ ಬಿಜೆಪಿಗೆ ಒಳ್ಳೆಯದಾಗಲಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News