×
Ad

ಸಮುದ್ರ ಮೀನುಗಾರಿಕೆಗೆ ಮುನ್ನೆಚ್ಚರಿಕೆ ಅತ್ಯಗತ್ಯ: ಡಾ.ಕೆ.ಜಿ.ಜಗದೀಶ್

Update: 2017-09-25 19:24 IST

ಮಂಗಳೂರು, ಸೆ.25: ಸಮುದ್ರ ಮೀನುಗಾರಿಕೆ ಎನ್ನುವುದು ಸೂಕ್ಷ್ಮ ವ್ಯವಸ್ಥೆಯಾಗಿದ್ದು, ಇಲ್ಲಿ ಎಚ್ಚರಿಕೆಯ ಕಾರ್ಯನಿರ್ವಹಣೆ ಅತೀ ಅಗತ್ಯವಾಗಿದೆ. ಸಮುದ್ರ ಹಾಗೂ ಸಿಹಿನೀರಿನ ಮೀನುಗಾರಿಕೆಯ ಬೆಳವಣಿಗೆಯಲ್ಲಿ ಐಸಿಎಆರ್-ಸಿಎಂಎಫ್ ಆರ್‌ಐ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮೀನುಗಾರಿಕೆಯ ವೃದ್ಧಿಗೆ ಇಂತಹ ಕಾರ್ಯಾಗಾರಗಳು ಪ್ರಯೋಜನವಾಗಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಹೇಳಿದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್-ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್-ಸಿಎಂಎಫ್ ಆರ್‌ಐ)ಯ ಮಂಗಳೂರು ಸಂಶೋಧನಾ ಕೇಂದ್ರವು ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ಸಮುದ್ರ ಪರಿಸರದ ಆರೋಗ್ಯದೊಂದಿಗೆ ಕರಾವಳಿಯ ಕೈಗಾರೀಕರಣದ ಸಾಮರಸ್ಯ’ ಎಂಬ ವಿಷಯದ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.

ದ.ಕ.ಜಿಲ್ಲೆಯಲ್ಲಿ ಮೀನುಗಾರಿಕೆಗೆ ಹೆಚ್ಚಿನ ಅವಕಾಶಗಳಿದ್ದು, ಜಿಲ್ಲೆಯ ಆರ್ಥಿಕತೆಗೂ ಮೀನುಗಾರಿಕೆ ಉತ್ತಮ ಕೊಡುಗೆಗಳನ್ನು ನೀಡಿದೆ. ಜಿಲ್ಲೆಯ ಮೀನುಗಾರರ ಸಮಸ್ಯೆಗಳನ್ನು ಅರಿಯುವಲ್ಲಿ ಐಸಿಎಆರ್-ಸಿಎಂಎಫ್ ಆರ್‌ಐ ಸಂಸ್ಥೆಯು ಜಿಲ್ಲಾಡಳಿತದೊಂದಿಗೆ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಡಾ.ಕೆ.ಜಿ.ಜಗದೀಶ್ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕೇಂದ್ರದ ವಿಜ್ಞಾನಿ ಮುಖ್ಯಸ್ಥೆ ಡಾ. ಪ್ರತಿಭಾ ರೋಹಿತ್ ಮಾತನಾಡಿ, ಸಂಸ್ಥೆಯು ಸಂಶೋಧನೆಗಳ ಮೂಲಕ ಸಮುದ್ರ ಮೀನುಗಾರಿಕೆಯ ಬೆಳವಣಿಗೆಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಮೀನುಗಾರರ ಅನುಕೂಲಕ್ಕಾಗಿ ಸಂಸ್ಥೆಯು ಮೊಬೈಲ್ ಆ್ಯಪ್‌ವೊಂದನ್ನು ಸಿದ್ಧಪಡಿಸಿದೆ. ಅದರಲ್ಲಿ ವಾತಾವರಣ, ಸೈಕ್ಲೋನ್, ಮೀನುಗಾರಿಕೆಗೆ ಸೂಕ್ತ ಸ್ಥಳ ಇವುಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಜತೆಗೆ ಕೇಂದ್ರವು ಮೀನಿನ ಆಹಾರೋತ್ಫನ್ನವನ್ನೂ ಮಾರುಕಟ್ಟೆಗೆ ನೀಡುತ್ತಿದೆ ಎಂದರು.

ಮಹಾರಾಷ್ಟ್ರ ಮ್ಯಾಂಗ್ರೂವ್ ಸೆಲ್‌ನ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎನ್.ವಾಸುದೇವನ್ ಹಾಗೂ ಹೊಸದಿಲ್ಲಿ ಐಸಿಎಆರ್‌ನ ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಡಾ. ಪಿ. ಪ್ರವೀಣ್ ಅವರು ವಿಷಯ ಮಂಡಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸಮುದ್ರ ಮೀನುಗಾರಿಕೆಯ ನೀತಿಯ ಪ್ರಕಟನೆಗಳನ್ನು ಬಿಡುಗಡೆಗೊಳಿಸಿದರು.

ಕೇಂದ್ರದ ವಿಜ್ಞಾನಿಗಳಾದ ಡಾ. ಎ.ಪಿ.ದಿನೇಶ್ ಬಾಬು ಸ್ವಾಗತಿಸಿದರು. ಗೀತಾ ಶಶಿಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News