×
Ad

ಸುಳ್ಯ: ಮದ್ರಸಗಳ ಮೂಲ ಸೌಕರ್ಯಗಳ ಸಮೀಕ್ಷೆಗೆ ಸಚಿವ ತನ್ವೀರ್ ಸೇಠ್ ಚಾಲನೆ

Update: 2017-09-25 20:23 IST

ಸುಳ್ಯ, ಸೆ.25: 2011-12ರಲ್ಲಿ ಕೇವಲ 265 ಕೋಟಿಯಿದ್ದ ಅಲ್ಪಸಂಖ್ಯಾತ ಬಜೆಟನ್ನು 2,750 ಕೋಟಿಗೆ ಏರಿಸಿದ ಸಾಧನೆ ಸಿದ್ದರಾಮಯ್ಯ ಸರಕಾರದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಈಗಾಗಲೇ ಹಲವು ಯೋಜನೆಗಳು ಜಾರಿಯಲ್ಲಿದ್ದು, ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗುತ್ತಿದ್ದು, ಒತ್ತುವರಿ ಜಮೀನು ಮತ್ತು ಆಸ್ತಿಯನ್ನು ವಶಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್ ಹೇಳಿದರು. ಇವರು ಸುಳ್ಯದ ಅನ್ಸಾರ್ ಸಂಸ್ಥೆಯ 50ನೆ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸುಳ್ಯ ತಾಲೂಕು ಮದ್ರಸಗಳ ಮೂಲ ಸೌಕರ್ಯಗಳ ಸಮೀಕ್ಷೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧಿನಗರ ಜುಮಾ ಮಸೀದಿ ಖತೀಬ್ ಅಲ್‌ಹಾಜ್ ಅಶ್ರಫ್ ಕಾಮಿಲ್ ಸಖಾಫಿಯವರಿಗೆ ಬ್ಯಾನರ್ ಹಸ್ತಾಂತರಿಸಿ ಸಮೀಕ್ಷೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಎಂ.ಮುಸ್ತಫ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್.ಸಂಶುದ್ದೀನ್, ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯ ಟಿ.ಎಂ.ಶಹೀದ್, ಅನ್ಸಾರಿಯಾ ಯತೀಂಖಾನ ಪದಾಧಿಕಾರಿಗಳಾದ ಹಾಜಿ ಅಬ್ದುಲ್ ಮಜೀದ್, ಲತೀಫ್ ಹರ್ಲಡ್ಕ, ಆದಂ ಹಾಜಿ ಕಮ್ಮಾಡಿ, ಅನ್ಸಾರ್ ಪದಾಧಿಕಾರಿಗಳಾದ ಟಿ.ಎಂ. ಖಾಲಿದ್, ಮಹಮ್ಮದ್ ಹಾಜಿ ಬುಶ್ರಾ, ಹಾಜಿ ಅಬ್ದುಲ್ ಹಮೀದ್ ಜನತಾ, ಜಿ.ಅಬೂಬಕರ್ ಗುರುಂಪು, ಎಂ.ಜೆ.ಎಂ. ಪದಾಧಿಕಾರಿಗಳಾದ ಅಬ್ದುಲ್ ಹಾಜಿ ಕಲ್ಲಪಳ್ಳಿ, ಹಾಜಿ ಕೆ. ಬಿ.ಮುಹಮ್ಮದ್, ಖಾದರ್ ಹಾಜಿ ಪಾರೆ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಕೆ.ಬಿ. ಇಬ್ರಾಹಿಂ ಸ್ವಾಗತಿಸಿದರು. ಯೋಜನೆಯ ವಿವರಗಳು:  ಸುಳ್ಯ ತಾಲೂಕಿನ ಮದರಸಗಳ ಮೂಲ ಸೌಕರ್ಯಗಳ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಮೊಹಲ್ಲಾ ಆಡಳಿತ ಮಂಡಳಿಯನ್ನು ಜಾಗೃತಗೊಳಿಸುವುದು., ಸಮೀಕ್ಷೆಯ ನಂತರ ಮೂಲ ಸೌಕರ್ಯಗಳಾದ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಪೀಠೋಪಕರಣ, ಪಾಠೋಪಕರಣ, ಶೌಚಾಲಯ, ಸುಸಜ್ಜಿತ ಕ್ಲಾಸ್ ರೂಮ್‌ಗಳಿಗೆ ಅನುದಾನಕ್ಕೆ ಸರಕಾರಕ್ಕೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವುದು., ಅನ್ಸಾರ್ ವತಿಯಿಂದ ಮತ್ತು ದಾನಿಗಳ ಸಹಕಾರದಿಂದ ಸಾಂಕೇತಿಕವಾಗಿ ಸವಲತ್ತುಗಳ ವಿತರಣೆಗೆ ಯೋಜನೆ ರೂಪಿಸುವುದು., ವ್ಯಕ್ತಿತ್ವ ವಿಕಸನ, ಬೇಸಿಗೆ ಶಿಬಿರ, ಪ್ರತಿಭಾ ಪುರಸ್ಕಾರ ಮೊದಲಾದವುಗಳಿಗೆ ಉತ್ತೇಜನ ನೀಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News