ಪಡುಬಿದ್ರಿ: ಯುವಕ ನೇಣು ಬಿಗಿದು ಆತ್ಮಹತ್ಯೆ
ಪಡುಬಿದ್ರಿ,ಸೆ.25: ಯುವಕನೋರ್ವ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳಮಾಡಿಕೊಂಡು ಮನೆಯಿಂದ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಜಮಾಡಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವನನ್ನು ಸುಕೇಶ್ (20) ಎಂದು ಗುರುತಿಸಲಾಗಿದೆ. ಈತನ ಮನೆಯಲ್ಲಿ ಕೊರಳು ಕಟ್ಟುವ ಕಾರ್ಯಕ್ರಮ ನಡೆಯುತಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಆತನ ಅಕ್ಕನೊಂದಿಗೆ ಜಗಳ ಮಾಡಿಕೊಂಡು ಇನ್ನು ಮುಂದೆ ಮನೆಗೆ ಬರುವುದಿಲ್ಲ ಎಂದು ಹೇಳಿ ಹೊರಟಿದ್ದ. ಆತನನ್ನು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಈ ವೇಳೆ ಇಲ್ಲಿನ ಗ್ರಾಮ ಪಂಚಾಯತ್ ಕಚೇರಿ ಬಳಿಯ ಕಟ್ಟಡವೊಂದರ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಯತ್ನ ನಡೆಸಿದ್ದನು. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಈ ವೇಳೆ ಮೃತಪಟ್ಟಿದ್ದ.
ಎರಡು ತಿಂಗಳ ಹಿಂದೆ ಅಣ್ಣನ ಆತ್ಮಹತ್ಯೆ: ಇದೇ ಜಾಗದಲ್ಲಿ ಈತನ ಅಣ್ಣ ಗಣೇಶ್ ಎಂಬಾತನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಸುಕೇಶ್ ಆತ್ಮಹತ್ಯೆ ಮಾಡಿಕೊಂಡ ಪಕ್ಕದ ಕಟ್ಟಡದ ಮರವೊಂದಕ್ಕೆ ನೇಣು ಬಿಗಿದು ಗಣೇಶ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.