×
Ad

ತಾಯಿ-ಶಿಶು ಮರಣ ತಡೆಗಟ್ಟಲು ಕ್ರಮ ಕೈಗೊಳ್ಳಿ: ಉಡುಪಿ ಜಿಲ್ಲಾಧಿಕಾರಿ

Update: 2017-09-25 21:03 IST

ಉಡುಪಿ, ಸೆ.25: ಜಿಲ್ಲೆಯಲ್ಲಿ ಗರ್ಭಿಣಿ ತಾಯಂದಿರ ಮತ್ತು ನವಜಾತ ಶಿಶುಗಳ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತಿದ್ದರು.

ತಾಯಂದಿರ ಮತ್ತು ನವಜಾತ ಶಿಶುಗಳ ಮರಣ ತಡೆಗಟ್ಟಲು ಇಲಾಖೆಯ ಎಲ್ಲಾ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ, ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ ವಿವಿಧ ಕಾರಣಗಳಿಂದಾಗಿ 57 ಶಿಶು ಮರಣ ಹಾಗೂ 7 ತಾಯಿ ಮರಣ ಸಂಭವಿಸಿದ್ದು, ಜನಿಸಿದ ಮಕ್ಕಳಿಗೆ ತಕ್ಷಣದಿಂದ ಎದೆ ಹಾಲು ನೀಡುವ ಬಗ್ಗೆ ಎಲ್ಲಾ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಅ.2ರಿಂದ ಮಾತೃಪೂರ್ಣ ಯೋಜನೆ ಪ್ರಾರಂಭಗೊಳ್ಳಲಿದ್ದು, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸಮೀಪದ ಅಂಗನವಾಡಿ ಯಲ್ಲಿಯೇ ಪೌಷ್ಠಿಕ ಆಹಾರ ತಯಾರಿಸಿ, ಅಲ್ಲಿಯೇ ನೀಡಲು ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗಸ್ಥ ಮಹಿಳೆಯರು ತಾವು ಕೆಲಸ ಮಾಡುವ ಸ್ಥಳದ ಸಮೀಪದ ಅಂಗನವಾಡಿಯಲ್ಲಿ ಈ ಯೋಜನೆಯ ಪ್ರಯೋಜನ ದೊರೆಯು ವಂತೆ ಮಾಡಲು ಸೂಚನೆ ನೀಡಲಾಗಿದೆ. ಅಂಗನವಾಡಿಯಿಂದ ದೂರದ ಲ್ಲಿರುವ ಗ್ರಾಮದ ಮಹಿಳೆಯರಿಗೆ ಸೈಕಲ್‌ನಲ್ಲಿ ಡಬ್ಬಾವಾಲ ಮಾದರಿಯಲ್ಲಿ ಮನೆಗೆ ಆಹಾರ ತಲುಪಿಸಲು ಚಿಂತನೆ ನಡೆಸಲಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News