ಸಂಶೋಧನೆಗೆ ಅಪಾರ ಪರಿಶ್ರಮ ಶ್ರದ್ಧೆ ಅಗತ್ಯ: ಡಾ.ಮನು ಬಳಿಗಾರ್
ಕೊಣಾಜೆ,ಸೆ.25: ನಾವು ಜೀವನದಲ್ಲಿ ಉತ್ತಮವಾದ ಮೌಲ್ಯಗಳನ್ನು, ವಿಚಾರಗಳನ್ನು ಮೈಗೂಡಿಕೊಂಡು ಅಪಾರವಾದ ಪರಿಶ್ರಮ, ಶ್ರದ್ಧೆಯಿಂದ ಮುನ್ನಡೆದರೆ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಆಶ್ರಯದಲ್ಲಿ `ಕನ್ನಡ ಸಂಶೋಧನೆ: ಕನ್ನಡ ಜಗತ್ತು' ಎಂಬ ವಿಷಯದಲ್ಲಿ ನಾಲ್ಕು ದಿನಗಳ ರಾಜ್ಯಮಟ್ಟದ ಸಂಶೋಧನಾ ಕಮ್ಮಟವನ್ನು ಸೋಮವಾರದಂದು ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಕರ ಮನಸ್ಸು, ಉತ್ತಮ ವೈಚಾರಿಕ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳುವುದರಿಂದ ಉತ್ತಮ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಖಂಡಿತಾ ಸಾಧ್ಯವಿದೆ. ಸಂಶೋಧನಾ ಕ್ಷೇತ್ರದಲ್ಲಿ ನಾವು ಯಾವತ್ತೂ ನೈಜತೆಯ ವಿಷಯಗಳಿಗೆ ಒತ್ತುಕೊಡಬೇಕಾಗಿದೆ. ಆದರೆ ಇತ್ತೀಚೆಗೆ ಸಂಶೋಧನೆಗಳಲ್ಲಿ ನೈಜ ವಿಷಯಗಳನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿರುವುದು ಖೇಧಕರವಾಗಿದ್ದು, ಇಂತಹ ಪ್ರಯತ್ನ ಯಾವುದೇ ಸಂಶೋಧಕರಿಂದಲೂ ಆಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ ಎಂದರು.
ಪರಧರ್ಮಗಳನ್ನು ಗೌರವಿಸುವ ಕೆಲಸ ನಮ್ಮದಾಗಬೇಕು ಎಂಬುದನ್ನು ಕವಿರಾಜಮಾರ್ಗದಲ್ಲಿ ಕವಿ ಅಂದಿನ ಕಾಲದಲ್ಲಿಯೇ ಹೇಳಿದ್ದನು. ಆದರೆ ಇಂದು ಅದಕ್ಕೆ ವಿರುದ್ದವಾಗಿಯೇ ಇಂದು ನಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅವರು, ಸಂಶೋಧನಾ ಕ್ಷೇತ್ರದಲ್ಲಿ ಸಮರ್ಪಕತೆ, ನೈಜತೆ ಎಂಬುದು ಬಹಳ ಅಗತ್ಯ ವಿಚಾರಗಳಾಗಿವೆ. ಆದ್ದರಿಂದ ಸಂಶೋಧನಾ ಮಾಹಿತಿಗಳನ್ನು ಕಂಪ್ಯೂಟರ್‍ಗಳಿಂದ ಅಥವಾ ಇನ್ನಿತರ ತಂತ್ರಗಳಿಂದ ಮಾತ್ರ ಕಳೆ ಹಾಕದೆ ವಿಷಯದ ಮೂಲ ಸಂಪನ್ಮೂಲವನ್ನು ಅರಿಯುವ ಪ್ರಯತ್ನ ಮಾಡಬೇಕು. ವಿಕಿಪಿಡಿಯಾದಿಂದ ಸಿಗುವ ಮಾಹಿತಿ ಸುಮಾರು 75/ ಅಂಶಗಳು ತಪ್ಪು ಮಾಹಿತಿಯೇ ಆಗಿರುತ್ತದೆ. ಅಲ್ಲದೆ ಸಮಾಜವು ನಿರಂತರವಾಗಿ ಬದಲಾವಣೆಯಾಗುತ್ತಾ ಇರುವುದರಿಂದ ಸಂಶೋಧನಾ ಕ್ಷೇತ್ರದಲ್ಲೂ ಬದಲಾವಣೆಗಳು ಆಗುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಯಾವುದೇ ಒಂದು ವಿಷಯದಲ್ಲಿ ಹಲವಾರು ವರ್ಷಗಳ ಹಿಂದೆ ಮಾಡಿದ ಸಂಶೋಧನೆ ಈಗಿನ ಕಾಲಕ್ಕೆ ಹೋಲಿಸಿದಾಗ ಹಲವಾರು ವಿಷಯಗಳಲ್ಲಿ ವ್ಯತ್ಯಾಸಗಳಿರುವುದನ್ನು ನಾವು ಕಂಡುಕೊಳ್ಳಬಹುದು. ಆದ್ದರಿಂದ ಸಂಶೋಧನೆ ಎಂಬುದು ಒಂದು ನಿರಂತರವಾದ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೆ ವಿವಿಯಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಅನುಕೂಲವಾಗುವಂತಹ ಎಲ್ಲಾ ವಾತಾವರಣವನ್ನು ವಿವಿಯಲ್ಲಿ ನಿರ್ಮಿಸಲಾಗಿದೆ ಎಂದರು.
ಸಮಾರಂಭದಲ್ಲಿ ಮಂಗಳೂರು ವಿವಿ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.