ಮಕ್ಕಳ ಸಾಹಿತಿ ಪಳಕಳ‌ ಸೀತಾರಾಮ ಭಟ್ ಇನ್ನಿಲ್ಲ

Update: 2017-09-25 16:31 GMT

ಮೂಡುಬಿದಿರೆ, ಸೆ.25: ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ, 'ಮಕ್ಕಳ ಸಾಹಿತಿ' ಎಂಬ ಖ್ಯಾತಿಯ ಪಳಕಳ ಸೀತಾರಾಮ ಭಟ್ (86) ಅಲ್ಪಕಾಲದ ಅನಾರೋಗ್ಯದಿಂದ ಪುತ್ತಿಗೆ ಪಳಕಳದ ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ. 

ಅವರು ಪತ್ನಿ, ಮೂಡುಬಿದಿರೆಯ ಖ್ಯಾತ ಲೆಕ್ಕ ಪರಿಶೋಧಕ ಪಿ.ರಘುಪತಿ ಭಟ್ ಸಹಿತ ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಂಗಳವಾರ ಅಂತ್ಯಸಂಸ್ಕಾರ ನಡೆಯಲಿದೆ. 

'ಮಕ್ಕಳ ಸಾಹಿತಿ' ಪಳಕಳ‌ ಸೀತಾರಾಮ ಭಟ್: ನಾಡಿನ ಅನೇಕ ದೈನಿಕಗಳೂ ಸೇರಿದಂತೆ ಅನೇಕ ನಿಯತಕಾಲಿಕೆಗಳಲ್ಲಿ ಅವರ ಚುಟುಕುಗಳು, ಬರೆಹಗಳು ಮಕ್ಕಳ ಅಂಕಣದಲ್ಲಿ ಪ್ರಕಟವಾಗಿ ಗಮನ ಸೆಳೆದಿವೆ. ಕಿನ್ನಿಗೋಳಿಯ 'ಯುಗಪುರುಷ' ಮೂಲಕ ಅವರ ನೂರಕ್ಕೂ ಅಧಿಕ ಕೃತಿಗಳು ಪ್ರಕಟಗೊಂಡಿರುವುದು ಅಪರೂಪದ ದಾಖಲೆ. ಇಳಿವಯಸ್ಸಿನಲ್ಲೂ ನಿರಂತರ ಎಂಬಂತೆ 'ಯುಗಪುರುಷ' ಪತ್ರಿಕೆಗೆ ಚುಟುಕುಗಳನ್ನು ನೀಡಿ ಅಂಕಣಕಾರರಾಗಿಯೂ ಅವರು ಮಕ್ಕಳ ಮನೋವಿಜ್ಞಾನಿಯಾಗಿ ಗಮನಸೆಳೆದಿದ್ದರು. 

ಎಂ.ಎ., ಬಿ.ಎಡ್ ಪದವೀಧರರಾಗಿದ್ದ ಸೀತಾರಾಮ ಭಟ್ 14 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಬಳಿಕ ಇಲ್ಲಿನ ಜೈನ್ ಹೈಸ್ಕೂಲ್‍ನಲ್ಲಿ 23 ವರ್ಷಗಳ ಕಾಲ ಶಿಕ್ಷಕರಾಗಿ 1988ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಸೋದರತ್ತೆ ಚೆನ್ನಮ್ಮ ಮತ್ತು ಪಂಜೆಯವರ ಕತೆ ಕವನಗಳಿಂದ ಪ್ರೇರಿತರಾಗಿ ಸಾಹಿತ್ಯ ರಚನೆ ಆರಂಭಿಸಿದ್ದ ಅವರು, 1945ರಲ್ಲಿ ತಮ್ಮದೇ ಶಿಶು ಸಾಹಿತ್ಯ ಮಾಲೆ ಸ್ಥಾಪಿಸಿ ಸ್ವರಚಿತ 31 ಕೃತಿಗಳನ್ನು ಹೊರತಂದಿದ್ದರು. ಈವರೆಗೆ 58 ಮಕ್ಕಳ ಕಥಾ ಸಂಗ್ರಹ, 35 ಕವನ ಸಂಗ್ರಹ, 24 ನಾಟಕ, 28 ಪ್ರಬಂಧ, ಪತ್ರಲೇಖನ, ಜೀವನ ಚರಿತ್ರೆ, ಕಿರು ಕಾದಂಬರಿಗಳು, 14 ಪ್ರೌಢ ಸಾಹಿತ್ಯ , 8 ಚುಟುಕು,1 ಕವನ ಸಂಗ್ರಹ, 1 ಪ್ರಬಂಧ ಹೀಗೆ ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಆಯ್ದ ಕಥೆಗಳು, ಕವನಗಳು ಹಾಗೂ ಆಯ್ದ ನಾಟಕಗಳ ಸಂಪುಟಗಳು 'ಯುಗಪುರುಷ' ಪ್ರಕಾಶನದ ಮೂಲಕ ಪ್ರಕಟಗೊಂಡಿದೆ. 

ಸುಮಾರು ಎರಡು ದಶಕಗಳ ಕಾಲ ಊರಿನ ಸಹಕಾರಿ ಸಂಘದ ಕಾರ್ಯಕಾರಿ ಸಮಿತಿಯಲ್ಲಿದ್ದ ಪಳಕಳರು ಎರಡು ದಶಕಗಳ ಕಾಲ ಇಲ್ಲಿನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು. ಜೀವಮಾನದ ಗಳಿಕೆ 1 ಲಕ್ಷ ರೂ.ಗಳೊಂದಿಗೆ ಪಳಕಳ ಪ್ರತಿಷ್ಠಾನ ರಚಿಸಿ ಬಡಮಕ್ಕಳಿಗೆ ನೆರವಾದವರು. ನಿವೇಶನ ರಹಿತ ನಾಲ್ಕು ಕುಟುಂಬಗಳಿಗೆ ತಲಾ ಐದು ಸೆಂಟ್ಸ್ ಮನೆ ನಿವೇಶನಗಳನ್ನು ಕೊಡುಗೆಯಾಗಿ ನೀಡಿದ್ದರು. 

1980ರಲ್ಲಿ ರಾಜ್ಯ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದ ಅವರು, ನಂತರ ಅನೇಕ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಸಕ್ರಿಯರಾಗಿ 1996ರ ಹಾಸನ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ, 2004ರಲ್ಲಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1998ರಲ್ಲಿ ಕಸಾಪದ ಮಕ್ಕಳ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿದ್ದರು. ಪ್ರಸಾರ ಭಾರತಿಯಿಂದ ಮಾನ್ಯತೆಯ ಕವಿಯಾಗಿದ್ದ ಅವರ ಕವನಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರದ ಪಠ್ಯಗಳಲ್ಲಿ, ಮಕ್ಕಳ ಮಾಣಿಕ್ಯ ಮೊದಲಾದ ಧ್ವನಿಸುರುಳಿಗಳಲ್ಲಿವೆ. 

ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ(2012) ಸೇರಿದಂತೆ ಮದ್ರಾಸ್ ಸರ್ಕಾರದ ಮಕ್ಕಳ ಸಾಹಿತ್ಯ ಗೌರವ(1955), ಕಸಾಪದ ಜಿ.ಪಿ.ರಾಜರತ್ನಂ ದತ್ತಿ ಬಹುಮಾನ(1983),  ಹೊಸದಿಲ್ಲಿಯ ಬಾಲ ಶಿಕ್ಷಕ ಪರಿಷತ್ ಪ್ರಶಸ್ತಿ (1987), ರಾಜ್ಯ ಸಾಹಿತ್ಯ ಅಕಾಡಮಿಯ ಮಕ್ಕಳ ಸಾಹಿತ್ಯ ಪುರಸ್ಕಾರ (1999), ಕೊ.ಅ.ಉಡುಪ ಪ್ರಶಸ್ತಿ, ಶಿವರಾಮ ಕಾರಂತ ಪ್ರತಿಷ್ಠಾನದ ಗೌರವ (2002), ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ(2003), ಕರ್ನಾಟಕ ಸಂಘ ಶಿವಮೊಗ್ಗದ ಮಕ್ಕಳ ಸಾಹಿತ್ಯ ಪ್ರಶಸ್ತಿ (2004), ಆಳ್ವಾಸ್ ನುಡಿಸಿರಿ ಪ್ರಶಸ್ತಿ(2005), 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಅಮೃತ ಮಹೋತ್ಸವ ಸಮ್ಮೇಳನದಲ್ಲಿ ಸಮ್ಮಾನ(2009), ಕರ್ನಾಟಕ ಬಾಲ ವಿಕಾಸ ಅಕಾಡಮಿ ಗೌರವ ಪ್ರಶಸ್ತಿ (2010), ರಾಜ್ಯ ಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ 'ಕರ್ನಾಟಕ ಮಕ್ಕಳ ಸಾಹಿತ್ಯ ರತ್ನ' ಗೌರವಗಳು ಪಳಕಳ‌ ಸೀತಾರಾಮ ಭಟ್ ರಿಗೆ ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News