ಹರೇಕಳ ಪಂಚಾಯತ್ ಎದುರು ಡಿವೈಎಫ್‍ಐ ಪ್ರತಿಭಟನೆ

Update: 2017-09-25 16:31 GMT

ಕೊಣಾಜೆ: ನಿವೇಶನರಹಿತರ ಪಟ್ಟಿ ಮಾಡುವಲ್ಲಿ ಹರೇಕಳ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ಸೋಮವಾರ ಪಂಚಾಯಿತಿ ಮುಂಭಾಗದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆ ನಡೆಯಿತು.

ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.90 ಪೂರೈಸಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ, ಆದರೆ ಗ್ರಾಮೀಣ ಭಾಗದಲ್ಲಿರುವ ಕಡು ಬಡವರಿಗೆ ಎಷ್ಟು ನಿವೇಶನ ನೀಡಿದ್ದೀರಿ ಎಂದು ಜನತೆಗೆ ತಿಳಿಸಬೇಕಿದೆ. ಪಂಚಾಯಿತಿ ಹಿಂದಿನಿಂದಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಸುದ್ದಿ ಮಾಡಿದ್ದು, ಶಿಕ್ಷೆಯಾಗುವ ಹಂತದಲ್ಲಿ ಮತ್ತೆ ಭ್ರಷ್ಟರು ಗೆದ್ದು ಬಂದಿದ್ದಾರೆ. ಸರ್ಕಾರದಿಂದ ವೇತನ ಪಡೆಯುವ ಅಧಿಕಾರಿಗಳು ನಿವೇಶನರಹಿತರ ಪಟ್ಟಿ ಮಾಡಲು ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.  

ಪ್ರತಿಭಟನಾ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಮನವಿ ಸ್ವೀಕರಿಸಿ ಈಗಾಗಲೇ ಸರ್ವೇ ನಂಬ್ರ 124 ಮತ್ತು 125ರಲ್ಲಿ 7.50 ಎಕರೆ ಜಮೀನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡುವಂತೆ ಒತ್ತಾಯಿಸಿ ಪಂಚಾಯಿತಿ ಮನವಿ ಮಾಡಿದ್ದು, ಗ್ರಾಮಕರಣಿಕ ಮುಖಾಂತರ ಕಂದಾಯಾಧಿಕಾರಿಗೆ ತಲುಪಿದೆ ಎಂದರು. 

ಇದರಿಂದ ಆಕ್ರೋಶಿತರಾದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮುಖಂಡ ರಫೀಕ್ ಹರೇಕಳ, ಇಂತಹ ಮಾತುಗಳು ಹಿಂದಿನಿಂದಲೇ ಕೇಳುತ್ತಾ ಬಂದಿದ್ದೇವೆ. ಗ್ರಾಮದಲ್ಲಿ ಪಂಚಾಯಿತಿ ಸದಸ್ಯರು 10ರಿಂದ 20 ಸಾವಿರ ಹಣ ಪಡೆದು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಅನುಮತಿ ನೀಡುತ್ತಿದ್ದರೂ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ಜಾಗ ನೀಡುವ ಮೊದಲು ಇರುವ ನಿವೇಶನರಹಿತರ ಪಟ್ಟಿ 15 ದಿನಗಳಲ್ಲಿ ಮಾಡದಿದ್ದರೆ, ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು. 

ಡಿವೈಎಫ್‍ಐ ಜಿಲ್ಲಾ ಮುಖಂಡ ರಫೀಕ್ ಹರೇಕಳ ಪ್ರತಿಭಟನೆಯ ನೇತೃತ್ವದ ವಹಿಸಿದ್ದರು. ಉಳ್ಳಾಲ ವಲಯ ಕೋಶಾಧಿಕಾರಿ ಸುನಿಲ್ ತೇವುಲ, ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್, ಸಿಪಿಐಎಂ ಮುಖಂಡರಾದ ಉಮರಬ್ಬ, ಕೆ.ಎಚ್.ಹಮೀದ್, ಮುಖಂಡರಾದ ಎವರಿಸ್, ಖಾಲಿದ್, ಜಬ್ಬಾರ್ ಆಲಡ್ಕ, ಸಿರಾಜ್ ಆಲಡ್ಕ, ನಿಝಾಮ್ ಹರೇಕಳ, ಇಬ್ರಾಹಿಂ ಪುತ್ತ, ಸಿದ್ದೀಕ್ ನ್ಯೂಪಡ್ಪು, ಲತೀಫ್ ನ್ಯೂಪಡ್ಪು, ಅಶ್ರಫ್ ಇನ್ನಿತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News