ಅಮೆರಿಕ ಪ್ರಯಾಣ ನಿಷೇಧ: ಕೊರಿಯ, ವೆನೆಝುವೆಲಕ್ಕೆ ವಿಸ್ತರಣೆ

Update: 2017-09-25 17:07 GMT

ವಾಶಿಂಗ್ಟನ್, ಸೆ. 25: ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ರವಿವಾರ ನೂತನ ಪ್ರಯಾಣ ನಿಷೇಧ ಆದೇಶವನ್ನು ಹೊರಡಿಸಿದೆ. ಈ ಬಾರಿ ನಿಷೇಧಿತ ದೇಶಗಳ ಪ್ರಜೆಗಳು ಅಮೆರಿಕ ಪ್ರವೇಶಿಸುವುದನ್ನು ಅನಿರ್ದಿಷ್ಟಾವಧಿಗೆ ಅದು ವಿಸ್ತರಿಸಿದೆ ಹಾಗೂ ನಿಷೇಧಿತ ದೇಶಗಳ ಪಟ್ಟಿಯನ್ನು ಆರರಿಂದ ಎಂಟಕ್ಕೆ ವಿಸ್ತರಿಸಿದೆ.

ಹಿಂದಿನ ಆರು ದೇಶಗಳ ಪಟ್ಟಿಯಿಂದ ಸುಡಾನನ್ನು ಕೈಬಿಡಲಾಗಿದೆ ಹಾಗೂ ಉತ್ತರ ಕೊರಿಯ ಸೇರಿದಂತೆ ಹೊಸದಾಗಿ ಮೂರು ದೇಶಗಳನ್ನು ಸೇರಿಸಲಾಗಿದೆ. ಅಣ್ವಸ್ತ್ರ ಪರೀಕ್ಷೆಯ ವಿಚಾರದಲ್ಲಿ ಉತ್ತರ ಕೊರಿಯ ಮತ್ತು ಅಮೆರಿಕಗಳ ನಡುವೆ ಈಗ ಪ್ರತಿನಿತ್ಯ ಮಾತಿನ ಸಮರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯ ಹೊಸಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎನ್ನಲಾಗಿದೆ.

ನೂತನ ಪಟ್ಟಿಯಲ್ಲಿರುವ ದೇಶಗಳೆಂದರೆ ಇರಾನ್, ಲಿಬಿಯ, ಸೊಮಾಲಿಯ, ಸಿರಿಯ ಮತ್ತು ಯಮನ್ ಹಾಗೂ ಹೊಸದಾಗಿ ಸೇರ್ಪಡೆಗೊಂಡ ದೇಶಗಳು ಉತ್ತರ ಕೊರಿಯ, ಚಾಡ್ ಮತ್ತು ವೆನೆಝುವೆಲ.

‘‘ಹಿಂದಿನ ವಿಫಲ ನೀತಿಗಳನ್ನು ಮುಂದುವರಿಸಲು ನಮಗೆ ಸಾಧ್ಯವಿಲ್ಲ. ಆ ನೀತಿಗಳು ನಮ್ಮ ದೇಶಕ್ಕೆ ಭಾರೀ ಅಪಾಯಗಳನ್ನು ಒಡ್ಡಿದೆ’’ ಎಂದು ಹೇಳಿಕೆಯೊಂದರಲ್ಲಿ ಟ್ರಂಪ್ ಹೇಳಿದರು.

‘‘ನನ್ನ ಅತ್ಯುನ್ನತ ಬದ್ಧತೆ ಅಮೆರಿಕನ್ ಜನತೆಯ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ಹಾಗೂ ಈ ಪ್ರಯಾಣ ನಿಷೇಧ ಆದೇಶವನ್ನು ಹೊರಡಿಸುವ ಮೂಲಕ ನಾನು ನನ್ನ ಪವಿತ್ರ ಬದ್ಧತೆಯನ್ನು ಈಡೇರಿಸುತ್ತಿದ್ದೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News