ಜರ್ಮನಿ: 4ನೆ ಬಾರಿಗೆ ಚಾನ್ಸಲರ್ ಆಗಿ ಮರ್ಕೆಲ್ ಆಯ್ಕೆ

Update: 2017-09-25 17:02 GMT

ಬರ್ಲಿನ್ (ಜರ್ಮನಿ), ಸೆ. 25: ಜರ್ಮನಿಯಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ನಾಲ್ಕನೆ ಬಾರಿಗೆ ಆಯ್ಕೆಯಾಗಿದ್ದಾರೆ. ಆದರೆ, ಅದೇ ವೇಳೆ, ಎರಡನೆ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ಕಡು ಬಲಪಂಥೀಯ ಎಎಫ್‌ಡಿ ಪಕ್ಷವು ಸಂಸತ್ತಿಗೆ ಪ್ರವೇಶ ಪಡೆದಿದೆ.

ಹನ್ನೆರಡು ವರ್ಷಗಳಿಂದ ಅಧಿಕಾರದಲ್ಲಿರುವ ಮರ್ಕೆಲ್‌ರ ಕನ್ಸರ್ವೇಟಿವ್ ಕ್ರಿಶ್ಚಿಯನ್ ಯೂನಿಯನ್ (ಸಿಡಿಯು/ಸಿಎಸ್‌ಯು) ಮೈತ್ರಿ ಕೂಟವು ಸುಮಾರು 33 ಶೇಕಡ ಮತಗಳನ್ನು ಪಡೆದುಕೊಂಡಿದೆ ಎಂದು ಆರಂಭಿಕ ಫಲಿತಾಂಶ ತಿಳಿಸಿದೆ. ಇದು 1949ರ ಬಳಿಕ ಈ ಮೈತ್ರಿಕೂಟದ ಅತ್ಯಂತ ಕಳಪೆ ಪ್ರದರ್ಶನವಾಗಿದೆ.

ಅದರ ಸಮೀಪದ ಪ್ರತಿಸ್ಪರ್ಧಿಗಳಾದ ಸೋಶಿಯಲ್ ಡೆಮಾಕ್ರಟರು ಮತ್ತು ಅವರ ಅಭ್ಯರ್ಥಿ ಮಾರ್ಟಿನ್ ಶುಲ್ಝ್ ಹೆಚ್ಚಿನ ಅಂತರದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು. ಈ ಮೈತ್ರಿಕೂಟವು 21 ಶೇಕಡ ಮತಗಳನ್ನು ಪಡೆದುಕೊಂಡಿದೆ.

ಆದರೆ, ಜರ್ಮನಿ ವ್ಯವಸ್ಥೆಗೆ ಸಡ್ಡು ಹೊಡೆಯುವಂತೆ, ಇಸ್ಲಾಮ್ ವಿರೋಧಿ ಮತ್ತು ವಲಸೆ ವಿರೋಧಿ ‘ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್‌ಡಿ) ಸುಮಾರು 13 ಶೇಕಡ ಮತಗಳನ್ನು ಬಾಚಿಕೊಂಡಿದೆ. ಇದರೊಂದಿಗೆ ಅದು ದೇಶದ ಮೂರನೆ ಅತೀ ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ.

ಜರ್ಮನಿಯಲ್ಲಿ ‘ರಾಜಕೀಯ ಭೂಕಂಪ’

ಎಎಫ್‌ಡಿ ಮೈತ್ರಿಕೂಟದ ಉತ್ತಮ ನಿರ್ವಹಣೆ ಜರ್ಮನ್ ರಿಪಬ್ಲಿಕ್‌ನ ಇತಿಹಾಸದಲ್ಲೇ ಒಂದು ಮಹತ್ವದ ಕ್ಷಣವಾಗಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಜರ್ಮನಿಯಲ್ಲಿ ‘ರಾಜಕೀಯ ಭೂಕಂಪ’ ನಡೆದಿದೆ ಎಂದು ಪ್ರಮುಖ ಪತ್ರಿಕೆ ‘ಬಿಲ್ಡ್’ ಹೇಳಿದೆ.

ಚುನಾವಣಾ ಫಲಿತಾಂಶವು ಹೊರಬೀಳುತ್ತಿರುವಂತೆಯೇ, ಎಎಫ್‌ಡಿ ಬೆಂಬಲಿಗರು ಬರ್ಲಿನ್ ಕ್ಲಬ್‌ನಲ್ಲಿ ಸೇರಿದರು.

 ಅದೇ ವೇಳೆ, ನೂರಾರು ಪ್ರತಿಭಟನಾಕಾರರು ಹೊರಗೆ ಜಮಾಯಿಸಿ, ‘ನಾಝಿಗಳೇ ತೊಲಗಿ’ ಎಂಬ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News