ದೇಶದ ಆರ್ಥಿಕತೆಯಲ್ಲಿ ಸಮಸ್ಯೆಗಳಿವೆ : ಒಪ್ಪಿಕೊಂಡ ಗಡ್ಕರಿ

Update: 2017-09-25 17:38 GMT

ಹೊಸದಿಲ್ಲಿ,ಸೆ.25: ದೇಶದ ಆರ್ಥಿಕತೆಯಲ್ಲಿ ಕೆಲವೊಂದು ಸಮಸ್ಯೆಗಳಿರುವುದಾಗಿ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಒಪ್ಪಿಕೊಂಡಿದ್ದು, ಮೋದಿ ಸರಕಾರವು ಅದನ್ನು ಸಮರೋಪಾದಿಯಲ್ಲಿ ಸರಿಪಡಿಸಲಿದೆ ಯೆಂದು ಭರವಸೆ ನೀಡಿದ್ದಾರೆ.

ಕೇಂದ್ರ ಸರಕಾರವು ಕೈಗೊಂಡಿರುವ ಬೃಹತ್ ಸುಧಾರಣೆಗಳು, ದೇಶದ ಅರ್ಥಿಕ ಬೆಳವಣಿಗೆಯು ಮಂದಗತಿಗೆ ತಲುಪಲು ಕಾರಣವಾಗಿದೆಯೆಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರೂ ಆದ ಗಡ್ಕರಿ ತಿಳಿಸಿದರು ಹಾಗೂ ಈ ಬಿಕ್ಕಟ್ಟು ತಾತ್ಕಾಲಿಕವಾದುದು ಎಂದು ಅವರು ಅಭಿಪ್ರಾಯಿಸಿದರು.

ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ‘ದೊಡ್ಡ ಮಟ್ಟದ ಸುಧಾರಣೆಗಳು ನಡೆಯುವಾಗ, ಆರಂಭದಲ್ಲಿ ಕೆಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅದನ್ನು ಸರಿಪಡಿಸಲು ಸರಕಾರವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ದಿಕ್ಕಿನಲ್ಲಿ ನಾವು ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದೇವೆ’’ ಎಂದು ಹೇಳಿದರು.

ಜಿಎಸ್‌ಟಿ ಜಾರಿಯು ಒಂದು ಅಭೂತಪೂರ್ವ ಘಟನೆಯೆಂದು ಬಣ್ಣಿಸಿದ ಅವರು, ಅದನ್ನು ತ್ವರಿತವಾಗಿ ಜಾರಿಗೊಳಿಸಿದ್ದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಅಭಿನಂದಿಸಿದರು.

 ಜಿಎಸ್‌ಟಿ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ಕೆಲವೊಂದು ಸಮಸ್ಯೆಗಳಿವೆಯಾದರೂ, ಅದನ್ನು ಬಗೆಹರಿಸಲಾಗುವುದು ಎಂದರು.

ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವು ಎರಡಂಕಿಯನ್ನು ತಲುಪಲಿದೆಯೆಂದು ಗಡ್ಕರಿ ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News