ಕಾರ್ಕಳ: ತರಬೇತಿ ಕಾರ್ಯಾಗಾರ

Update: 2017-09-25 17:56 GMT

ಉಡುಪಿ, ಸೆ.25: ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಕಾರ್ಕಳ ತಾಪಂ ಸಭಾಂಗಣದಲ್ಲಿ ಕಾರ್ಕಳ ತಾಪಂ ಕಾರ್ಯ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಚುನಾಯಿತ ಗ್ರಾಪಂ ಸದಸ್ಯರಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಕುರಿತು ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

 ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಗೊಳಿಸಲು ಜನಪ್ರತಿನಿಧಿಗಳು ಗ್ರಾಮಮಟ್ಟದಲ್ಲಿ ಕೆಲಸ ಮಾಡುವಂತೆ, ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಉತ್ತೇಜನ ನೀಡುವ ಮೂಲಕ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಅಳಿಸಲು ಶಕ್ತಿಮೀರಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯ ಬಗ್ಗೆ ವಿವರಿಸಿದರು. ಕಟ್ಟಡ ಕಾರ್ಮಿಕರು ಗುರುತಿನ ಚೀಟಿಗೆ ಹೆಸರು ನೊಂದಾಯಿ ಸುವ ಮೂಲಕ ಮಂಡಳಿಯಿಂದ ಸಿಗುವ ಸೌಲ್ಯಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.

ಅತಿಥಿಗಳಾಗಿ ಕಾರ್ಕಳ ತಾಪಂ ಉಪಾಧ್ಯಕ್ಷ ಗೋಪಾಲ ಮೂಲ್ಯ, ಕಾರ್ಕಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಉಪನ್ಯಾಸಕ ಬಿ.ಜಿ.ಶಂಕರಮೂರ್ತಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ ಇದರ ಯೋಜನಾ ನಿರ್ದೇಶಕರಾದ ಪ್ರಶಾಂತ್ ಸ್ವಾಗತಿಸಿ, ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News