ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಸಾಮಾನ್ಯ ಸಭೆ

Update: 2017-09-26 11:38 GMT

ಬೆಳ್ತಂಗಡಿ,ಸೆ.26  :  ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಸಾಮಾನ್ಯ ಸಭೆಯು ಮಂಗಳವಾರ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅ.1ರಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕನ್ನು ಸಂಪೂರ್ಣ ನಿಷೇಧಿಸಲು ತೀರ್ಮಾನಿಸಿದ್ದು ಪ್ರತಿ ಅಂಗಡಿಗೆ ದಾಳಿ ನಡೆಸಿ ಮಾರಾಟ ಮಾಡುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳುವುದು ಅಲ್ಲದೆ ಖರೀಧಿದಾರರ ವಿರುದ್ದವೂ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ನಗರ ವ್ಯಾಪ್ತಿಯಲ್ಲಿ ಪಂಚಾಯತ್ ಬಾಡಿಗೆ ಕಟ್ಟಡದಲ್ಲಿ ಬಾಡಿಗೆ ಇರುವ ಕೆಲವು ಅಂಗಡಿಗಳ ಬಾಡಿಗೆ ಬಾಕಿ ಇದ್ದು ಇವರಿಗೆ ಒಮ್ಮೆ ಮುನ್ನೆಚ್ಚರಿಕೆಯನ್ನು ನೀಡಲಾಗುವುದು  ನಂತರ ಪಾವತಿಸದಿದ್ದರೆ ಬೀಗ ಹಾಕುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಣಯಿಸಲಾಯಿತು. ನೀರಿನ ಸಂಪರ್ಕದಲ್ಲಿಯೂ ಬಿಲ್ ಬಾಕಿ ಇದ್ದು ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. 

ಚರ್ಚ್ ರೋಡ್ ಬಳಿ ಕೊಳವೆ ಬಾವಿಯೊಂದರಲ್ಲಿ ಕೆಸರು ಮಿಶ್ರಿತ ನೀರು ಬರುತ್ತಿದ್ದು ಇದನ್ನು ಸರಿಪಡಿಸಬೇಕೆಂದು ನಾಮ ನಿರ್ಧೇಶನ ಸದಸ್ಯ ಲ್ಯಾನ್ಸಿ ಪಿರೇರಾ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಶೀಘ್ರವೇ ಇದನ್ನು ದುರಸ್ತಿಗೊಳಿಸಲಾಗುವುದು ಎಂದರು.ಕೋಟ್ಲಾಗುಡ್ಡೆ ಬಳಿ ಇರುವ ನೀರಿನ ಟ್ಯಾಂಕ್‍ಗೆ ಸರಬರಾಜಾಗುವ ನೀರು ಹಾಕುವ ಪಂಪ್ ಕೆಟ್ಟು ಹೋಗಿದ್ದು ಇದನ್ನು ಇದಕ್ಕೆ ಹೊಸತು ಖರೀದಿಸಲು ಸಭೆ ನಿರ್ಣಾಯಿಸಿತು.

ಸಂತ ತೆರೇಸ ಪಿಯು ಕಾಲೇಜಿನಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ನಡೆದಿದ್ದು ಇದಕ್ಕೆ ಅನುದಾನದ ಕೊರತೆಯಿದ್ದು ಇದಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಅಧ್ಯಕ್ಷ ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು. ನಂತರ ಮೈಕ್ ಹಾಗೂ ಪ್ರಮಾಣ ಪತ್ರ ಮುದ್ರಣದ ವೆಚ್ಚವನ್ನು ನೀಡುವ ಕುರಿತು ನಿರ್ಣಯಿಸಲಾಯಿತು.

ಅಗಸ್ಟ್ ತಿಂಗಳ ಜಮೆ ಖರ್ಚು ವಿವರಗಳನ್ನು ಪರಿಶೀಲಿಸಿ ಮಂಜೂರುಗೋಳಿಸಲಾಯಿತು. ಬೆಳ್ತಂಗಡಿ ಸಮೂದಾಯ ಆರೋಗ್ಯ ಕೇಂದ್ರದ ಶವಾಗಾರದ ಬಳಿ ದುರ್ವಾಸನೆ ಬರುತ್ತಿದ್ದು ಇದನ್ನು ಸರಿಪಡಿಸುವಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಮನವಿ ಮಾಡಿದರು. ಬೀದಿ ದೀಪ ಸಮರ್ಪಕ ನಿರ್ವಾಹನೆ, ಬೆಳ್ತಂಗಡಿ ಸಮೂದಾಯ ಆರೋಗ್ಯ ಕೇಂದ್ರದ ಬಟ್ಟೆ ಒಗೆಯುವ ಯಂತ್ರದ ಬಳಕೆಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಉಪಾದ್ಯಕ್ಷ ಬಿ ಜಗದೀಶ್ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಮುಖ್ಯಧಿಕಾರಿ ಜೆಜಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ ಅರಿಗ, ಸಹರಿ ರೋಜ್ಗಾರ್ ಯೋಜನೆಯ ಯೋಜನಾಧಿಕಾರಿ ವೆಂಕಟ್ರಮಣ ಶರ್ಮ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News