ವಿದ್ಯಾದೇವತೆಯನ್ನು ಪೂಜಿಸುವ ಶೇ.64 ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ : ಬಿ.ಕೆ.ಹರಿಪ್ರಸಾದ್

Update: 2017-09-26 12:15 GMT

ಭಟ್ಕಳ,ಸೆ.26:ವಿದ್ಯಾದೇವತೆ ಸರಸ್ವತಿಯನ್ನು ಪೂಜಿಸುವ ದೇಶದ ಶೇ.64ರಷ್ಟು ಮಹಿಳೆಯರು ಅನಕ್ಷರಸ್ಥರಾಗಿದ್ದು ಕೇವಲ ಪೂಜೆ ಪುನಸ್ಕಾರಗಳಿಂದ ವಿದ್ಯೆ ಲಭಿಸುವುದಿಲ್ಲ,  ಜಾತಿ-ಜಾತಿಗಳ ಮದ್ಯೆ ಹೊಡೆದಾಡುವ ಇಂದಿನ ವ್ಯವಸ್ಥೆಯಲ್ಲಿ ಲಕ್ಷ್ಮೀ ಪೂಜಿಸುವ 90% ಮಹಿಳೆಯರು ಆಸ್ತಿ ಹಕ್ಕಿಗಾಗಿ ಪರದಾಡುತ್ತಿದ್ದಾರೆ.  ಜನರು ಅಕ್ಷರಸ್ಥರಾದರೆ ಸಾಲದು ವಿದ್ಯಾವಂತರಾಗಬೇಕು ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಕರೆ ನೀಡಿದರು.

ಅವರು ಮಾಜಿ ಶಾಸಕ ಜೆ.ಡಿ.ನಾಯ್ಕ ಅಭಿಮಾನಿ ಬಳಗದ ವತಿಯಿಂದ ಇಲ್ಲಿನ ಶ್ರೀ ನಾಗಯಕ್ಷೆ ಸಭಾಭವನದಲ್ಲಿ ಆಯೋಜಿಸಲಾದ `ನಾಗರಿಕ ಸೇವೆಗಳು ಗಗನ ಕುಸುಮವಲ್ಲ' ಮಾಹಿತಿ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.  

ಲಕ್ಷ್ಮೀಯನ್ನು ಪೂಜಿಸದ ಬಿಲ್‍ಗ್ರೇಟ್ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದಾನೆ. ಸರಸ್ವತಿಯನ್ನು ಪೂಜಿಸದ ಐನ್‍ಸ್ಟಿನ್ ಜಗತ್ತಿನ ಶ್ರೇಷ್ಠ ವಿಜ್ಞಾನಿಯಾಗಿದ್ದು ಹೇಗೆ, ದುರ್ಗಾಪೂಜೆಯನ್ನು ಮಾಡದ ನೆಪೋಲಿಯನ್ ರಕ್ಷಣಾ ಕಾರ್ಯದಲ್ಲಿ ಹೆಸರು ಮಾಡಿದ್ದು ಹೇಗೆ ಎಂಬುದನ್ನು ದೇಶದ ಹಿಂದುಳಿದ ಬಡ ಜನರು ವಿಮರ್ಶೆ ಮಾಡಿಕೊಳ್ಳಬೇಕು. ಏಕಲವ್ಯನ ಬೆರಳನ್ನು ಕೇಳುವ, ಕರ್ಣನ ಕವಚ ಬೇಡುವ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಗಳು ಕಲುಷಿತಗೊಂಡಿವೆ. ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳೇ ಕಳೆದರೂ ದೇಶದ ಎಲ್ಲರೂ ಎರಡು ಹೊತ್ತು ಅನ್ನ ಕಾಣುವ ಸ್ಥಿತಿ ನಿರ್ಮಾಣವಾಗಿಲ್ಲ.

ಸಂಬಳ, ಸೌಕರ್ಯಕ್ಕಾಗಿ ಐಎಎಸ್, ಐಪಿಎಸ್ ಪಾಸು ಮಾಡಬೇಕು ಹಂಬಲ ಹಲವರಲ್ಲಿ ಜಾಗೃತವಾಗಿದೆ. ಆದರೆ ರಾಷ್ಟ್ರ ನಿರ್ಮಾಣಕ್ಕೆ ಬದ್ಧತೆ ಬೇಕು. ಒಳ್ಳೆಯ ಧ್ಯೇಯೋದ್ಧೇಶಗಳನ್ನು ಇಟ್ಟುಕೊಂಡು ಮುನ್ನುಗ್ಗಬೇಕು. ಇದನ್ನು ಪಾಕಿಸ್ತಾನ, ಚೀನಾವನ್ನು ದ್ವೇಷಿಸುತ್ತ ದಿನ ಕಳೆಯುವುದರಿಂದ ಸಾಧಿಸಲು ಸಾಧ್ಯವಿಲ್ಲ. ಸಮಾಜ ಸುಧಾರಣೆಗಾಗಿ ನಮ್ಮಲ್ಲಿಯೇ ಬದಲಾವಣೆ ಅತ್ಯಗತ್ಯವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರೂ ವಿದ್ಯೆಯನ್ನು ಪಡೆಯಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಕಾಗೋಡು ಅಣ್ಣಪ್ಪ, ರಾಜು ಪೂಜಾರಿ, ಐಎಎಸ್ ಅಧಿಕಾರಿ ಡಾ.ತೇಜಸ್ವಿ ನಾಯ್ಕ, ಡಾ.ರಾಜೇಶ ನಾಯ್ಕ,  ದಾಮೋದರ ಎ.ಟಿ. ಐಎಫ್‍ಎಸ್, ಗಣಪತಿ ನಾಯ್ಕ ಐಎಫ್‍ಎಸ್, ಡಾ.ನಾಗರಾಜ, ರಾಜಶೇಖರ ಗಾಳಿಪುರ, ಸೂರಜ್ ನಾಯ್ಕ ಸೋನಿ, ಗುರುಮೂರ್ತಿ ನಾಯ್ಕ, ಎಫ್.ಕೆ.ಮೊಗೇರ, ನಾಗೇಶ ದೇವಡಿಗ, ಸುರೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಕಾರ್ಯದರ್ಶಿ ಜಿ.ಜಿ.ಶಂಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಾಗತಿಸಿದರು. ಶ್ರೀಧರ ಶೇಟ್, ಮಂಜುಳಾ ಶಿರೂರು ಕಾರ್ಯಕ್ರಮ ನಿರೂಪಿಸಿದರು.

ಮೋದಿಯವರ ಮೌನದಿಂದಲೇ ದೇಶ ಅಭದ್ರವಾಗಿದೆ

ದೇಶದ ಪ್ರಧಾನ ಮಂತ್ರಿಯಾದವರು ಹಿಂಸೆ, ಅಭದ್ರತೆಯ ಖಂಡಿಸಬೇಕು. ಅವರು ಮೌನವಾಗಿರುವುದರಿಂದಲೇ ಕರ್ನಾಟಕ ಕರಾವಳಿಯಲ್ಲಿಯೂ ಗಲಭೆ ಎಬ್ಬಿಸುವ ಕಾರ್ಯವನ್ನು ಅವರ ಬೆಂಬಲಿಗರು ಮಾಡುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಟ್ಕಳಕ್ಕೆ ಬಂದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದ್ದು, ಅದನ್ನು ಕಡೆಗಣಿಸಿ ಗಲಭೆಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಎಚ್ಚರದಿಂದ ಇದ್ದು, ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕಳೆದ ಬಾರಿ ಕರಾವಳಿಯಲ್ಲಿನ ನೈತಿಕ ಪೊಲೀಸ್‍ಗಿರಿಯಿಂದಾಗಿ ರೋಸಿಹೋದ ಜನರು ಕಾಂಗ್ರೆಸ್‍ಗೆ ಮತ ನೀಡಿ ಗೆಲ್ಲಿಸಿದ್ದಾರೆ.

ಈ ಬಾರಿಯೂ ಬಿಜೆಪಿ ಗಲಭೆ ಸೃಷ್ಟಿಸಿ ಚುನಾವಣೆ ಗೆಲ್ಲುವ ಪ್ರಯತ್ನ ನಡೆಸಿದರೆ ಅದು ಸಫಲವಾಗುವುದಿಲ್ಲ. ಜನರಿಗೆ ಇದು ಸ್ಪಷ್ಟವಾಗಿ ಅರ್ಥವಾಗುತ್ತಿದ್ದು, ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ಹೊಂದಿರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಪಕ್ಷ ಬಯಸಿದರೆ ಮಾತ್ರ ಸ್ಪರ್ಧಿಸಲು ಸಿದ್ಧರಿರುವುದಾಗಿ ಪ್ರತಿಕ್ರಿಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News