ಸಂಘಟನೆಗಳು ಸ್ವಾರ್ಥ ಮತ್ತು ಆಧಿಕಾರದ ಆಸೆಯಿಂದ ಮುಕ್ತವಾಗಿರಬೇಕು : ಭಾಸ್ಕರ ಮಲವೂರು
ಪುತ್ತೂರು,ಸೆ.26: ಸಾಮಾಜಿಕ ರಕ್ಷಣೆಗಾಗಿ ರೂಪುಗೊಂಡಿರುವ ಸಂಘಟನೆಗಳು ಹಣ ಸಂಪಾದಿಸುವ ಚಳುವಳಿಗಾಗಿ ಮಾರ್ಪಾಡುಗೊಂಡಿರುವುದು ದುರಂತವಾಗಿದ್ದು, ಸ್ವಾರ್ಥ ಮತ್ತು ಅಧಿಕಾರ ಆಸೆಯಿಂದ ಮುಕ್ತವಾಗಿ ಸಂಘಟನೆಯ ಮೂಲ ಉದ್ದೇಶವನ್ನು ಯುವ ಪೀಳಿಗೆಯತ್ತ ಕೊಂಡೊಯ್ಯುವ ಕೆಲಸವನ್ನು ಮಾಡಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮಂಗಳೂರು ತಾಲೂಕು ಸಂಚಾಲಕ ಭಾಸ್ಕರ ಮಲವೂರು ಹೇಳಿದರು.
ಅವರು ಸೋಮವಾರ ಇಲ್ಲಿನ ರೋಟರಿ ಮನಿಷಾ ಸಭಾಂಗಣದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ಪುನರ್ ರಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಂಘಟನಾ ಸಂಚಾಲಕ ಶಿವಪ್ಪ ಅಟ್ಟೋಲೆ ಮಾತನಾಡಿ ಮನುವಾದಿಗಳಿಂದಾಗಿ ದಲಿತರಿಗೆ ನ್ಯಾಯ ದೊರಕಲು ಎಂದಿಗೂ ಸಾಧ್ಯವಿಲ್ಲ. ನ್ಯಾಯಾಧೀಶರು ಮನುವಾದಿ ಆಗಿರುವುದರಿಂದ ಅವರು ಸಂವಿದಾನಕ್ಕೆ ವಿರುದ್ದವಾಗಿ ತೀರ್ಪು ನೀಡುತ್ತಾರೆ. ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿ, ಪಂಗಡದವರಿಗೆ ಹಿಂಬಡ್ತಿ ನೀಡಿ ತೀರ್ಪು ನೀಡಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು. ತಾಲೂಕು ಸಂಚಾಲಕ ಆನಂದ ಮಿತ್ತಬೈಲ್ ಮಾತನಾಡಿ ದಲಿತ ಬಂಧುಗಳು ಶಿಕ್ಷಣ ಪಡೆದು ಅಕ್ಷರ ಜ್ಞಾನ ಪಡೆದುಕೊಳ್ಳುವುದರೊಂದಿಗೆ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಪ್ರೋ.ಕೃಷ್ಣಪ್ಪರವರ ತತ್ವಗಳನ್ನು ಅರ್ಥಮಾಡಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಹಿಂದಿಗಿಂತಲೂ ಹೆಚ್ಚಿನ ದೌರ್ಜನ್ಯವನ್ನು ಎದುರಿಸಬೇಕಾಗಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನೂತನ ತಾಲೂಕು ಸಮಿತಿಯ ಪದಾಧಿಕಾರಿಗಳನ್ನು ಘೋಷಿಸಲಾಯಿತು. ತಾಲೂಕು ಸಂಚಾಲಕರಾಗಿ ಶಿವಪ್ಪ ಅಟ್ಟೋಳೆ, ಸಂಘಟನಾ ಸಂಚಾಲಕರಾಗಿ ಬಾಬು ಎನ್ ಸವಣೂರು, ಪೊಡಿಯ ಎನ್, ಆನಂದ ಮಿತ್ತಬೈಲು ಹಾಗೂ ಹರೀಶ್ ಅಂಕಜಾಲ್, ಖಜಾಂಚಿಯಾಗಿ ಪುಟ್ಟಣ್ಣ ತೋಟಂತಿಲ, ಸದಸ್ಯರುಗಳಾಗಿ ವಿಶ್ವನಾಥ ಪುಣ್ಚತ್ತಾರು, ಗಣೇಶ್ ಗುರಿಯಾನ, ನಾಗೇಶ್ ಕುರಿಯ, ಚಂದ್ರಹಾಸ ಕೆ.ಜಿ, ದಿನೇಶ್ ಬೂಡು, ಹರ್ಷಿತ್ ಕುಮಾರ್ ಎಮ್ ಹಾಗೂ ಉಪೇಂದ್ರ ಅವರ ಹೆಸರುಗಳನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ರಘು ಎಕ್ಕಾರು ಘೋಷಣೆ ಮಾಡಿದರು.
ಸಂಘಟನೆಯ ಪ್ರಮುಖರಾದ ಸಂಕಪ್ಪ ಕಾಂಚನ್, ರಾಕೇಶ್ ಕುಂದರ್, ಬಾಬು ಸವಣೂರು, ಎನ್. ಪೊಡಿಯ, ಯಶೋಧ ಆಲಂತಾಯ, ಮೀನಾಕ್ಷಿ ಬಂಬಿಲ, ಸುಶೀಲ ಕುರಿಯ ಹಾಗೂ ಸುಂದರಿ ಕಲ್ಲಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹರೀಶ್ ಆಲಂತಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಗುರಿಯಾನ ವಂದಿಸಿದರು.