ಜಲೀಲ್ ಕರೋಪಾಡಿ ಹತ್ಯೆ ಪ್ರಕರಣ: ವಿಟ್ಲದಲ್ಲಿ ಸಿಐಡಿ ಅಧಿಕಾರಿಗಳ ತಂಡ

Update: 2017-09-26 13:14 GMT

ಬಂಟ್ವಾಳ, ಸೆ. 26: ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಿ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸೋಮವಾರ ಸಿಐಡಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಸಿಐಡಿ ಎಸ್ಪಿ ಆನಂದ್ ಹಾಗೂ ಎಸ್ಪಿ ಸುಜಿತ್ ನೇತೃತ್ವದ ತಂಡ ಸೋಮವಾರ ಕರೋಪಾಡಿ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ ಘಟನೆಯ ಬಗ್ಗೆ ಪಂಚಾಯತ್‍ನ ಪಿಡಿಒ ಹಾಗೂ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದೆ ಎಂದು ಜಲೀಲ್ ತಂದೆ ಉಸ್ಮಾನ್ ಕರೋಪಾಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ

"ನಮ್ಮ ನಿವಾಸಕ್ಕೆ ಭೇಟಿ ನೀಡಿದ ಸಿಐಡಿ ತಂಡ, ನನ್ನನ್ನು ವಿಚಾರಣೆ ನಡೆಸಿದರು. ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ದಿನೇಶ್ ಶೆಟ್ಟಿ, ವಿನೋದ್ ಹಾಗೂ ಪ್ರದೀಪ್ ಎಂಬವರನ್ನು ಗುರುತಿಸಲಾಗಿದ್ದರೂ ಈವರೆಗೂ ಅವರನ್ನು ಬಂಧಿಸುವ ಕಾರ್ಯ ನಡೆದಿಲ್ಲ ಎಂದು ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದೇನೆ" ಎಂದವರು ತಿಳಿಸಿದ್ದಾರೆ.

ಈ ಮೂವರು ಆರೋಪಿಗಳನ್ನು ಪೊಲೀಸರು ರಕ್ಷಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನ್ಯಾಯಾಲಯದಲ್ಲೂ ಬಂಧನದಿಂದ ರಿಲೀಫ್ ಸಿಕ್ಕುವಂತಾಗಿದೆ ಎಂದು ತಾನು ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದಾಗಿ ಉಸ್ಮಾನ್ ಕರೋಪಾಡಿ ತಿಳಿಸಿದ್ದಾರೆ.

ಭೂಗತ ಪಾತಕಿ ವಿಕ್ಕಿ ಶೆಟ್ಟಿ ಎಂಬಾತನಿಂದ ತನಗೆ ಪಂಚಾಯತ್‍ನ ಉಪಾಧ್ಯಕ್ಷ ಹುದ್ದೆಗೆ ಸಂಬಂಧಿಸಿ ಬಂದಿರುವ ದೂರವಾಣಿ ಬೆದರಿಕೆ ಕರೆಯ ಬಗ್ಗೆಯೂ ಮಾಹಿತಿ ನೀಡಿರುವುದಾಗಿ ತಿಳಿಸಿರುವ ಅವರು, ಸದ್ಯ ತನ್ನ ಮಗನ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಈ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸುವಂತೆ  ಸಿಐಡಿ ಅಧಿಕಾರಿಗಳ ಮುಂದೆ ವಿನಂತಿಸಿದ್ದೇನೆ. ಈ ಬಗ್ಗೆ ಸಿಐಡಿ ಅಧಿಕಾರಿಗಳು ನ್ಯಾಯ ಒದಗಿಸುವ ಭರವಸೆಯನ್ನು ತನಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News