×
Ad

ತ್ರಿವಳಿ ತಲಾಖ್: ರಾಜೀವ್‍ಗಾಂಧಿ ಸೂತ್ರ ಮೋದಿ ಅನುಸರಿಸಲಿ

Update: 2017-09-26 19:03 IST

ಪಡುಬಿದ್ರಿ,ಸೆ.26: ಶಾಬಾನು ಪ್ರಕರಣದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಎಲ್ಲಾ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಕರೆಸಿ ಅಭಿಪ್ರಾಯ ಪಡೆದು ಪರಿಹಾರ ಕಂಡುಕೊಂಡಿದ್ದರು. ಈಗ ತ್ರಿವಳಿ ತಲಾಖ್‍ಗೆ ಸಂಬಂಧಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ  ಅವರು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ಕಾನೂನನ್ನು ರೂಪಿಸುವ ಸಂದರ್ಭದಲ್ಲಿ ಮುಸ್ಲಿಂ ಮತಪಂಡಿತರ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಪಡೆಯಬೇಕು ಎಂದು ಪಡುಬಿದ್ರಿಯ ಶಂಸುಲ್ ಉಲೆಮಾ ಅಕಾಡಮಿ ಆಫ್ ಇಸ್ಲಾಮಿಕ್ ಜನರಲ್ ಎಜುಕೇಶನ್ ಆಗ್ರಹಿಸಿದೆ.

ಕಾಪು ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಮೊಯ್ದಿನಬ್ಬ, 1985ರಲ್ಲಿ ಮುಸ್ಲಿಮ್ ತಲಾಖ್ ಆದ ವಿಚ್ಚೇಧಿತ ಮಹಿಳೆಯರಿಗೆ ಜೀವನಾಂಶ ನೀಡಬೇಕು ಎಂಬ ಶಾಬಾನು ಪ್ರಕರಣ ದೇಶದಲ್ಲಿ ಕೋಲಾಹಲ ಉಂಟಾಗಿತ್ತು. ಇದಕ್ಕೆ ಸಂಬಂಧಿಸಿ ಅಂದಿನ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಅವರು ಎಲ್ಲಾ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಕರೆಸಿ ಸಮಸ್ಯೆ ಪರಿಹರಿಸಲು ಮುಂದಾಗಿದ್ದರು.

ಈಗಿನ ನರೇಂದ್ರ ಮೋದಿ ಸರ್ಕಾರವೂ ಇದೇ ರೀತಿ ಎಲ್ಲಾ ಮುಸ್ಲಿಂ ಪತಪಂಡಿತರ ಅಭಿಪ್ರಾಯವನ್ನು ಪಡೆಯಬೇಕು ಎಂದು ಅವರು ಒತ್ತಾಯಿಸಿದರು.ಚುನಾವಣೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಮತ ಪಂಡಿತರ ಅಭಿಪ್ರಾಯ ಸಲಹೆಗಳನ್ನು ಪಡೆಯದೇ ಕಾನೂನು ರೂಪಿಸಿದಲ್ಲಿ ಅದು ಧಾರ್ಮಿಕ ಸ್ವಾತಂತ್ರದ ಹರಣವಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿಷಯವನ್ನು ಚುನಾವಣಾ ಗಿಮಿಕ್ ಆಗಿ ಬಳಸುತ್ತಿದೆ. ಮುಸ್ಲಿಂ ಸಮುದಾಯದಲ್ಲಿರುವ ತಲಾಖ್ ಎಂಬ ವೈಯಕ್ತಿಕ ಹಾಗೂ ಧಾರ್ಮಿಕ ಹಕ್ಕನ್ನು ಇಂದು ಬಹುಸಂಖ್ಯಾತರನ್ನು ತೃಪ್ತಿ ಪಡಿಸುವುದಕ್ಕಾಗಿ ಹಾಗೂ ಮುಂದಿನ ಚುನಾವಣೆಯಲ್ಲಿ ಜಯಗಳಿಸುವ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಧಾರ್ಮಿಕ ಸ್ವಾತಂತ್ರವನ್ನು ಬಲಿಕೊಡುವುದು ಯಾವುದೇ ಸರ್ಕಾರದ ಭೂಷಣವಲ್ಲ ಎಂದು ನುಡಿದರು.

ವಿವಿಧತೆಯಲ್ಲಿ ಏಕತೆಯನ್ನು ವಿಶ್ವಕ್ಕೆ ಸಾರಿದ ಭಾರತದಲ್ಲಿ ಸಂವಿಧಾನದತ್ತವಾಗಿ ಬಂದಿರುವ ಧಾರ್ಮಿಕ ಸ್ವಾತಂತ್ರ ಪ್ರತಿಯೋರ್ವ ಭಾರತೀಯರ ಹಕ್ಕಾಗಿದೆ. ಅದರಲ್ಲಿ ಯಾವುದೇ ಸಂಶಯಗಳಿಲ್ಲ. ಯಾವುದೇ ಸರ್ಕಾರಗಳು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿ ಹಸ್ತಕ್ಷೇಪ ನಡೆಸುವುದು ಸಂವಿಧಾನ ವಿರೋಧಿಯಾಗಿರುತ್ತದೆ ಎಂಬ ತಿಳುವಳಿಕೆ ಜನಪ್ರತಿನಿಧಿಗಳಿಗೆ ಇರಬೇಕು.
ಧಾರ್ಮಿಕ ಹಸ್ತಕ್ಷೇಪ ಹಾಗೂ ಮಧ್ಯಪ್ರವೇಶ ಮಾಡಬಾರದು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ ಮೊಯಿದಿನಬ್ಬ, ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡವನ್ನು ಹೇರುವುದರ ಮೂಲಕ ರಾಷ್ಟ್ರದ ಸಮಗ್ರತೆ, ಅಖಂಡತೆ ಹಾಗೂ ಸಾರ್ವಭೌಮವನ್ನು ಎತ್ತಿ ಹಿಡಿಯಬೇಕು ಎಂದು ಎಲ್ಲಾ ಜನಪ್ರತಿನಿಧಿಗಳನ್ನು ಅವರು ಒತ್ತಾಯಿಸಿದರು.

ಬಿಜೆಪಿ ಷಡ್ಯಂತ್ರ: ಬಿಜೆಪಿ ಪಕ್ಷವು ಮುಸ್ಲಿಮ್ ರಾಷ್ಟ್ರೀಯ ಮಂಚ್ ಎಂಬ ಅಂಗಸಂಸ್ಥೆಯನ್ನು ಹುಟ್ಟುಹಾಕಿ ಮುಸ್ಲಿಮ್ ಮಹಿಳೆಯರನ್ನು ದಾರಿ ತಪ್ಪಿಸುವ ಷಡ್ಯಂತ್ರ ನಡೆಸುತ್ತಿದೆ. ಈ ಮೂಲಕ ತಲಾಖ್ ವಿರೋಧಿ ಹೋರಾಟ ನಡೆಸುತ್ತಿದೆ. ನೈಜ ಮುಸ್ಲಿಮರು ತಲಾಖ್ ವಿರುದ್ಧ ಧ್ವನಿ ಎತ್ತುವುದಿಲ್ಲ. ಅಲ್ಪಸಂಖ್ಯಾತರನ್ನು ವಿಭಜಿಸುವುದೇ ಬಿಜೆಪಿಯ ತಂತ್ರವಾಗಿದೆ. ತಲಾಖ್ ಎಂದೂ ಶಾಪವಲ್ಲ. ಗಂಡನಿಗೆ ತಲಾಖ್ ನೀಡುವ ಹಕ್ಕು ಹೆಂಡತಿಗೂ ಇದೆ. ಹೆಂಡತಿಗೂ ಎಲ್ಲಾ ರೀತಿಯ ಸ್ವಾತಂತ್ರವನ್ನು ಇಸ್ಲಾಮ್‍ನಲ್ಲಿ ನೀಡಿದೆ ಎಂದು ಅವರು ಹೇಳಿದರು.
ಅಧ್ಯಕ್ಷ ಹಾಜಿ ಕೆ.ಅಬ್ದುಲ್ ರಹ್ಮಾನ್, ಉಡುಪಿ ಜಿಲ್ಲಾ ಎಸ್‍ವೈಎಸ್ ಅಧ್ಯಕ್ಷ ಹಮ್ಮಬ್ಬ ಮೊಯಿದಿನ್, ಪಡುಬಿದ್ರಿ ವಲಯ ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕಂಚಿನಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News