ಆಸ್ಪತ್ರೆಯಲ್ಲಿದ್ದಾಗ ಎಲ್ಲಾ ಸಚಿವರು ಜಯಲಲಿತಾರನ್ನು ಭೇಟಿಯಾಗಿದ್ದರು: ಸಚಿವ ಸೆಲ್ಲೂರ್ ರಾಜು
ಚೆನ್ನೈ, ಸೆ.26: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಿಲ್ಲ ಎಂಬ ಎನ್ನುವ ತಮಿಳುನಾಡು ಸಚಿವರ ಹೇಳಿಕೆ ತದ್ವಿರುದ್ಧವಾದ ಹೇಳಿಕೆಯೊಂದನ್ನು ಸಚಿವ ಸೆಲ್ಲೂರ್ ಕೆ. ರಾಜು ನೀಡಿದ್ದಾರೆ.
2016ರ ಸೆಪ್ಟಂಬರ್ 22ರಿಂದ 75 ದಿನಗಳ ಕಾಲ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನೀವು ಭೇಟಿ ನೀಡಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜು, “ನಾನು ಸಹಿತ ಎಲ್ಲಾ ಸಚಿವರು ಅವರನ್ನು ಭೇಟಿಯಾಗಿದ್ದೇವೆ” ಎಂದಿದ್ದಾರೆ.
‘ಅಮ್ಮ’ನ ನಿಧನ ನಮಗೆ ತುಂಬಲಾರದ ನಷ್ಟವಾಗಿದೆ. ಈ ವಿಷಯದಲ್ಲಿ ನಾನು ಹೆಚ್ಚಿಗೆ ಏನೂ ಮಾತನಾಡಲು ಇಚ್ಛಿಸುವುದಿಲ್ಲ ಎಂದರು.
ಎಐಎಡಿಎಂಕೆ ನಾಯಕರು ಜಯಲಲಿತಾರ ಆರೋಗ್ಯ ಸ್ಥಿತಿಯ ಬಗ್ಗೆ ಸುಳ್ಳು ಹೇಳಿದ್ದಾರೆ. ಅವರಲ್ಲಿ ಯಾರೂ ಜಯಲಲಿತಾರನ್ನು ಭೇಟಿಯಾಗಿಲ್ಲ ಎನ್ನುವ ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್ ಹೇಳಿಕೆಯ ಬಗ್ಗೆ ರಾಜುರನ್ನು ಪ್ರಶ್ನಿಸಿದ್ದು, “ಈ ಹೇಳಿಕೆ ನೀಡಿದ ಸಚಿವರನ್ನೇ ಈ ಕುರಿತು ಪ್ರಶ್ನಿಸಬೇಕು” ಎಂದು ಉತ್ತರಿಸಿದರು.