ಬಾರಕೂರು ಕತ್ತಲೆ ಬಸದಿಯಲ್ಲಿ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ
ಬ್ರಹ್ಮಾವರ, ಸೆ.26: ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಣಿಪಾಲ ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಕೇಂದ್ರ, ನಿರ್ಮಿತಿ ಕೇಂದ್ರ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ, ಕರಾವಳಿ ಪ್ರವಾಸೋದ್ಯಮಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ‘ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯ ಒಂದು ಸಾಧನ’ ಎಂಬ ಸಂದೇಶದೊಂದಿಗೆ ಪ್ರವಾಸೋದ್ಯಮ ದಿನಾಚರಣೆಗೆ ಮಂಗಳವಾರ ಬಾರಕೂರಿನ ಕತ್ತಲೆ ಬಸದಿಯಲ್ಲಿ ಹಣತೆ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಮಾತ ನಾಡಿ, ಪ್ರತಿಯೊಬ್ಬರಲ್ಲಿ ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.
ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ಹಾಗೂ ಹಂಪಿ ವೃತ್ತದ ಪುರಾತತ್ವ ಅಧೀಕ್ಷಕಿ ಮೂರ್ತಿಶ್ವರಿ ಮಾತನಾಡಿ, ಇಂದು ಪೋಷಕರು ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಲು ಬಯಸುತ್ತಾರೆ. ಯಾರು ಕೂಡ ಇತಿಹಾಸ ತಜ್ಞರಾಗುವುದನ್ನು ಬಯಸುವುದಿಲ್ಲ. ಆದರೆ ಇತಿಹಾಸದ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯವಾಗಿ ಇರಬೇಕಾಗಿದೆ ಎಂದರು.
ಇತಿಹಾಸ ತಜ್ಞ ಗುರುಮೂರ್ತಿ ಬಾರಕೂರು ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ಮನೋಹರ್ ಶೆಟ್ಟಿ, ಬಾರಕೂರು ಗ್ರಾಪಂ ಅಧ್ಯಕ್ಷ ಶೈಲಾ ಡಿಸೋಜ, ಉಪಾಧ್ಯಕ್ಷ ಶಾಂತರಾಮ್ ಶೆಟ್ಟಿ, ಉಡುಪಿ ಪ್ರಾದೇಶಿಕ ಪ್ರವಾಸಿ ಕಚೇರಿಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್. ಉಪಸ್ಥಿತರಿದ್ದರು. ನಾಗರಾಜ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರು ಕತ್ತಲೆ ಬಸದಿಯಲ್ಲಿ ಇಡಲಾದ ನೂರಾರು ಹಣತೆಯನ್ನು ಬೆಳಗಿಸಿದರು.
ಜಿಲ್ಲೆಯಲ್ಲಿ 11ಪ್ರಾಚೀನ ಸ್ಮಾರಕ
ಬೆಂಗಳೂರು ವೃತ್ತದಲ್ಲಿ 130 ಹಾಗೂ ಹಂಪಿ ವೃತ್ತದಲ್ಲಿ 85 ಪ್ರಾಚೀನ ಸ್ಮಾರಕ ಗಳಿವೆ. ಹಂಪಿಯ 85ರಲ್ಲಿ 53ಸ್ಮಾರಕಗಳು ಯುನೆಸ್ಕೊ ವಿಶ್ವ ಪಾರಂಪರಿಕ ಸ್ಮಾರಕ ಎಂಬುದಾಗಿ ಘೋಷಿಸಲಾಗಿದೆ. ಬೆಂಗಳೂರು ವೃತ್ತದ ಶ್ರೀರಂಗಪಟ್ಟಣ ಹಾಗೂ ಹೊಯ್ಸಳ ಸಮೂಹ ಸ್ಮಾರಕವನ್ನು ವಿಶ್ವ ಪಾರಂಪರಿಕ ಸ್ಮಾರಕ ಎಂಬುದಾಗಿ ಘೋಷಿಸುವಂತೆ ಯೆನೆಸ್ಕೊಗೆ ಪ್ರಸ್ತಾಪ ಕಳುಹಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 11 ಪ್ರಾಚೀನ ಸ್ಮಾರಕಗಳಿದ್ದು, ಇಲ್ಲಿರುವ ಇನ್ನಷ್ಟು ಸ್ಮಾರಕಗಳನ್ನು ಸಾರ್ವಜನಿಕರು, ಇತಿಹಾಸ ತಜ್ಞರು ಗುರುತಿಸಿ ಸಂರಕ್ಷಿಸಬೇಕಾಗಿದೆ. ಜಿಲ್ಲೆಯ ಸ್ಮಾರಕಗಳನ್ನು ಕೂಡ ವಿಶ್ವ ಪಾರಂಪರಿಕ ಸ್ಮಾರಕವನ್ನಾಗಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ಹಾಗೂ ಹಂಪಿ ವೃತ್ತದ ಪುರಾತತ್ವ ಅಧೀಕ್ಷಕಿ ಮೂರ್ತಿಶ್ವರಿ ತಿಳಿಸಿದರು.