×
Ad

ಮಧುರೈ ಕಾಮರಾಜ ವಿ.ವಿ. ಸಹಾಯಕ ಅಧ್ಯಾಪಕಿಗೆ ಚೂರಿ ಇರಿತ

Update: 2017-09-26 22:12 IST

ಮಧುರೈ, ಸೆ. 26: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉದ್ಯೋಗ ನವೀಕರಿಸದ ಹಿನ್ನೆಲೆಯಲ್ಲಿ ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಂವಹನ ವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಾಧ್ಯಾಪಕಿ ಎಸ್. ಜೆನೇಫಾ ಅವರಿಗೆ ಅವರ ಕೊಠಡಿಯಲ್ಲಿ ಅದೇ ವಿಭಾಗದ ಮಾಜಿ ಅತಿಥಿ ಉಪನ್ಯಾಸಕನೋರ್ವ ಚೂರಿಯಿಂದ ಇರಿದ ಘಟನೆ ಮಂಗಳವಾರ ನಡೆದಿದೆ.

ಗಾಯಗೊಂಡಿರುವ ಜೆನೆಫಾ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಜೀವಕ್ಕೆ ಏನೂ ಅಪಾಯ ಇಲ್ಲ ಎಂದು ವಿಶ್ವವಿದ್ಯಾನಿಲಯದ ಮೂಲಗಳು ತಿಳಿಸಿವೆ.

ಎಂಕೆಯುನ ಮಾಜಿ ವಿದ್ಯಾರ್ಥಿ ಹಾಗೂ ಕುಲಾಮಂಗಳಂ ನಿವಾಸಿ ಜ್ಯೋತಿಮುರುಗನ್ ಕಳೆದ ಶೈಕ್ಷಣಿಕ ವರ್ಷದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಸಿಬ್ಬಂದಿ ಹಾಗೂ ಒಂದು ವರ್ಗದ ವಿದ್ಯಾರ್ಥಿಗಳೊಂದಿಗೆ ಇವರ ನಡವಳಿಕೆ ಸರಿ ಇಲ್ಲ ಎಂಬ ಆರೋಪ ಇದ್ದುದರಿಂದ ವಿಭಾಗದ ಮುಖ್ಯಸ್ಥರಾಗಿದ್ದ ಜೆನೇಫಾ ಅವರು ಜ್ಯೋತಿಮುರುಗನ್ ಅವರ ಉದ್ಯೋಗ ನವೀಕರಿಸದಿರಲು ನಿರ್ಧರಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರು ನೇಮಿಸಿಕೊಳ್ಳುವಂತೆ ಕೋರಲು ಜ್ಯೋತಿಮುರುಗನ್ ಆಗಾಗ ವಿಶ್ವವಿದ್ಯಾನಿಲಯದ ಜೆನೆಫಾ ಅವರ ಕೊಠಡಿಗೆ ಆಗಮಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News