ತೇಜ್‌ಪಾಲ್ ವಿರುದ್ಧದ ಆರೋಪ ಪಟ್ಟಿ ತಡೆಗೆ ಬಾಂಬೆ ಉಚ್ಚ ನ್ಯಾಯಾಲಯ ನಿರಾಕರಣೆ
ಪಣಜಿ, ಸೆ. 26: ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧ ಕೆಳ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ರೂಪಿಸುವುದಕ್ಕೆ ತಡೆ ನೀಡಲು ನಿರಾಕರಿಸಿರುವ ಬಾಂಬೆ ಉಚ್ಚ ನ್ಯಾಯಾಲಯದ ಪಣಜಿ ಪೀಠ, ಉಚ್ಚ ನ್ಯಾಯಾಲಯದ ಸಮ್ಮತಿ ಬಳಿಕ ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ.
2013ರಲ್ಲಿ ಗೋವಾದಲ್ಲಿ ನಡೆದ ಸಮ್ಮೇಳನದಲ್ಲಿ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಗೋವಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ ಆರೋಪ ಪಟ್ಟಿ ರೂಪಿಸುವುದನ್ನು ಪ್ರಶ್ನಿಸಿ ತೇಜ್‌ಪಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಪೀಠ ಈ ನಿರ್ದೇಶನ ನೀಡಿದೆ.
ಆರೋಪ ಪಟ್ಟಿ ರೂಪಿಸುವುದನ್ನು ಪ್ರಶ್ನಿಸಿರುವ ತೇಜ್‌ಪಾಲ್ ಪರ ನ್ಯಾಯವಾದಿ ಅಮನ್ ಲೇಖಿ, ಅತ್ಯಾಚಾರ ಆರೋಪ ಸುಳ್ಳು. ಪುರಾವೆಗಳನ್ನು ನಿರ್ವಹಿಸುವಲ್ಲಿ ಪ್ರಾಸಿಕ್ಯೂಷನ್ ಮೂರು ವರ್ಷ ವಿಳಂಬ ಮಾಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ವಕೀಲ ಸರೇಶ್ ಲೋಟ್ಲಿಕರ್, ಸಮರ್ಪಕ ವಿಚಾರಣೆಯಿಂದ ಮಾತ್ರ ಪತ್ರಕರ್ತರ ವಿರುದ್ಧ ಮಾಡಲಾದ ಆರೋಪದ ಸತ್ಯಾಸತ್ಯತೆ ಬೆಳಕಿಗೆ ಬರಬಹುದು ಎಂದಿದ್ದಾರೆ.
ಸಮ್ಮತಿ ಬಳಿಕ ಮಾತ್ರ ಕೆಳ ನ್ಯಾಯಾಲಯ ಸಾಕ್ಷಿಗಳನ್ನು ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಪೃಥ್ವಿರಾಜ್ ಚೌಹಾನ್ ನಿರ್ದೇಶಿಸಿದ್ದಾರೆ.