×
Ad

"ವಿಶೇಷ ಗಿಫ್ಟ್ ಗೆ ಆಯ್ಕೆಯಾಗಿದ್ದೀರಿ" ಎಂಬ ಮೊಬೈಲ್ ಕರೆಯನ್ನು ನಂಬಿ ಮೋಸಹೋದ ವ್ಯಕ್ತಿ

Update: 2017-09-26 22:43 IST

ಮಂಜೇಶ್ವರ, ಸೆ.26: ಇತ್ತೀಚಿನ ದಿನಗಳಲ್ಲಿ ಗಿಫ್ಟ್ ಹೆಸರಿನಲ್ಲಿ ದೂರವಾಣಿ ಕರೆಗಳು ಬರುವುದು ಸಾಮಾನ್ಯವಾಗಿದೆ. "ನಿಮ್ಮ ಮೊಬೈಲ್ ನಂಬರ್ ವಿಶೇಷ ಗಿಫ್ಟ್ ಗೆ ಆಯ್ಕೆಯಾಗಿದೆ. ನಿಮ್ಮ ವಿಳಾಸ ತಿಳಿಸಿದರೆ ನಾವು ಉಡುಗೊರೆಯನ್ನು ಕಳುಹಿಸುತ್ತೇವೆ. ಅಂಚೆ ಕಚೇರಿಯಲ್ಲಿ ಹಣ ಪಾವತಿಸಿ" ಎನ್ನುವ ಕರೆಯೊಂದು ಮೊಬೈಲ್ ಬಳಕೆದಾರರಿಗೆ ಬರುತ್ತಿದೆ. ಇದು ವಂಚನಾ ಜಾಲವೊಂದರ ಕೃತ್ಯವಾಗಿದ್ದು, ಇಲ್ಲಿನ ಬೆಜ್ಜ ನಿವಾಸಿ ಸುಕೇಶ್ ಎನ್ನುವವರು ಈ ಕರೆಯನ್ನು ಸತ್ಯವೆಂದು ನಂಬಿ 3,200 ರೂ.ಗಳನ್ನು ಕಳೆದುಕೊಂಡಿದ್ದಾರೆ.

ಒಂದು ವಾರಗಳ ಹಿಂದೆ ಸುಕೇಶ್ ರಿಗೆ ದೂರವಾಣಿ ಕರೆಯೊಂದು ಬಂದಿತ್ತು. "ತಾವು ನಮ್ಮ ವಿವಿಧ ಗಿಫ್ಟ್ ಗೆ ಆಯ್ಕೆಯಾಗಿದ್ದೀರಿ. ಕೇವಲ 3,200 ಪಾವತಿಸಿದರೆ ಸ್ಯಾಮ್ ಸಂಗ್ ಜೆ 7 ಮೊಬೈಲ್ ಪಡೆಯಬಹುದು" ಎಂದು ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದ. ಇದನ್ನು ನಂಬಿದ ಸುಕೇಶ್ ಹಣ ಪಾವತಿಸಲು ಒಪ್ಪಿದ್ದರು. ಇದರಂತೆ ಸೋಮವಾರ ಅಂಚೆ ಕಚೇರಿ ಸಿಬ್ಬಂದಿ ಪಾರ್ಸಲ್ ಪಡೆಯಲು ಅಂಚೆ ಕಚೇರಿಗೆ ತೆರಳುವಂತೆ ಸೂಚಿಸಿದ್ದರು.

ಅಂಚೆ ಕಚೇರಿಯಲ್ಲಿ 3,200 ರೂ. ಪಾವತಿಸಿ ಗಿಫ್ಟ್ ತೆರೆದು ನೋಡಿದಾಗ ಸುಕೇಶ್ ರಿಗೆ ಆಘಾತವಾಗಿತ್ತು. ಏಕೆಂದರೆ ಗಿಫ್ಟ್ ಪ್ಯಾಕ್ ನೊಳಗೆ ಸ್ಯಾಮ್ ಸಂಗ್ ಜೆ 7 ಬದಲು ತಗಡಿನ ತುಂಡೊಂದಿತ್ತು. ತಾನು ಮೋಸ ಹೋಗಿರುವುದು ತಿಳಿದು ಸುಕೇಶ್ ಕರೆ ಬಂದಿದ್ದ ದೂರವಾಣಿ ಸಂಖ್ಯೆಗೆ ಮತ್ತೆ ಕರೆದಾಗ ಕಾಲ್ ತೆಗೆಯುತ್ತಿರಲಿಲ್ಲ. ಬಳಿಕ ಮಂಜೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಇದರಂತೆ ಠಾಣಾಧಿಕಾರಿ ಆ ನಂಬರಿಗೆ ಕರೆ ಮಾಡಿದ್ದಾರೆ.

24 ಗಂಟೆಯೊಳಗೆ ಮೊಬೈಲ್ ಕಳುಹಿಸಿ ಕೊಡುವುದಾಗಿ ಅವರು ಹೇಳಿದ್ದಾರೆ. ಆದರೆ ಬಳಿಕ ಆ ನಂಬರಿಗೆ ಕರೆ ಮಾಡುವಾಗ ಕರೆ ಸ್ವೀಕರಿಸುವುದಿಲ್ಲ ಎಂದು ಸುಕೇಶ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News