×
Ad

ನಿಮ್ಮನ್ನು ಗಡಿಪಾರು ಮಾಡಬಾರದೇಕೆ?

Update: 2017-09-26 23:04 IST

ಮಂಗಳೂರು, ಸೆ. 26: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಜಿಲ್ಲೆಯ ಶಾಂತಿ ಸಾಮರಸ್ಯಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಯಾಕೆ ಗಡಿಪಾರು ಮಾಡಬಾರದು ಎಂದು ಪ್ರಶ್ನಿಸಿ ಕಲ್ಲಡ್ಕ ನಿವಾಸಿ ರತ್ನಾಕರ ಶೆಟ್ಟಿ ಮತ್ತು ಗೋಳ್ತಮಜಲು ಇಬ್ರಾಹಿಂ ಖಲೀಲ್ ಎಂಬವರಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಇವರಿಬ್ಬರೂ ಕಲ್ಲಡ್ಕ, ಬಿ.ಸಿ.ರೋಡ್, ಬಂಟ್ವಾಳ ಪರಿಸರದಲ್ಲಿ ದೊಂಬಿ, ಗಲಭೆ, ಹಲ್ಲೆ ಮೊದಲಾದ ಕೃತ್ಯಗಳಲ್ಲಿ ತೊಡಗಿ ಸಾರ್ವಜನಿಕ ಶಾಂತಿ ಭಂಗ ಕೃತ್ಯಗಳಲ್ಲಿ ತೊಡಗಿ ಸಾಮಾಜಿಕ ಸಾಮರಸ್ಯಕ್ಕೆ ತೊಡಕು ಉಂಟು ಮಾಡುವ ಆಪಾದನೆ ಹೊಂದಿದ್ದಾರೆ. ರೌಡಿ ಚಟುವಟಿಕೆ ನಿಯಂತ್ರಿಸಲು ಸಿಆರ್‌ಪಿಸಿ ಕಲಂ 107 ಮತುತಿ 110 ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ವಿವಿಧೆಡೆ ಅಪರಾಧ ಕೃತ್ಯದಲ್ಲಿ ತೊಡಗಿ, ಕೇಸು ದಾಖಲಾದ ಬಳಿಕ ಜಾಮೀನು ಪಡೆದು ಮತ್ತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕರಿಗೆ ಶಾಂತಿಭಂಗ ಮಾಡುತ್ತಿದ್ದರು. ಅಲ್ಲದೆ ಯುವಕರನ್ನು ಗಲಭೆಗೆ ಪ್ರಚೋದನೆ ನೀಡುತ್ತಿದ್ದರೆಂದು ಪೊಲೀಸರು ವರದಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಿಮ್ಮನ್ನು ಜಿಲ್ಲಾ ವ್ಯಾಪ್ತಿಯಿಂದ ಏಕೆ ಗಡಿಪಾರು ಮಾಡಬಾರದು ಹಾಗೂ ನಿಮ್ಮನ್ನು ಬೇರೆ ಜಿಲ್ಲೆಯ ಯಾವುದಾದರೊಂದು ಪೊಲೀಸ್ ಠಾಣೆಯಲ್ಲಿ ಪ್ರತಿದಿನ ಹಾಜರಿ ನೀಡುವಂತೆ ಏಕೆ ಪ್ರತಿಬಂಧಿಸಬಾರದು ಎಂಬುದಕ್ಕೆ ವಿವರಣೆಯೊಂದಿಗೆ ಅ.4 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ದಂಡಾಧಿಕಾರಿ ಎದುರು ಹಾಜರಾಗುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ನೊಟೀಸ್ ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News