ನೂತನ ತಾಲೂಕು ವ್ಯಾಪ್ತಿ: ಶೀಘ್ರ ಪೂರ್ಣಗೊಳಿಸಲು ಉಸ್ತುವಾರಿ ಸಚಿವರ ಸೂಚನೆ

Update: 2017-09-26 17:44 GMT

ಮಂಗಳೂರು, ಸೆ.26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಮೂಡಬಿದ್ರೆ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯನ್ನು ಅಂತಿಮಗೊಳಿಸಲು ಶಾಸಕರು ಸೇರಿದಂತೆ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮಗೊಳಿಸುವಂತೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನ ತಾಲೂಕು ರಚನೆಗಳ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ತಾಲೂಕು ವ್ಯಾಪ್ತಿಯ ಬಗ್ಗೆ ಕೆಲವು ಗೊಂದಲಗಳು ಸಾರ್ವಜನಿಕರಲ್ಲಿವೆ. ಮೂಡಬಿದ್ರೆ ತಾಲೂಕಿಗೆ ಗುರುಪುರ ಹೋಬಳಿಯ ಸೇರ್ಪಡೆಗೂ ವಿರೋಧ ಕಂಡುಬಂದಿದೆ. ಮಂಗಳೂರು ಉತ್ತರ ಶಾಸಕರೂ ಗುರುಪುರ ಹೋಬಳಿಯನ್ನು ಮೂಡಬಿದ್ರೆಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮೂಡಬಿದ್ರೆಗೆ ಹತ್ತಿರದಲ್ಲಿರುವ ಗುರುಪುರ ಹೋಬಳಿಯ ಗ್ರಾಮಗಳನ್ನು ಮೂಡಬಿದ್ರೆ ತಾಲೂಕಿಗೆ ಸೇರಿಸುವ ಬಗ್ಗೆ ಪರಿಶೀಲಿಸುವುದು ಸಮಂಜಸವಾಗಿದೆ ಎಂದು ಸಚಿವರು ಹೇಳಿದರು.

 ತಾಲೂಕು ರಚನೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಪ್ರಸ್ತುತ ಮೂಡಬಿದ್ರೆ ಹೋಬಳಿಯನ್ನು ಮಾತ್ರ ತಾಲೂಕಿಗೆ ಸೀಮಿತಗೊಳಿಸಿ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದ ಸಚಿವರು, ಗುರುಪುರ ಹೋಬಳಿ, ಮುಲ್ಕಿ ಹಾಗೂ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಸೇರ್ಪಡೆ ಸಂಬಂಧ ಆ ಭಾಗದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಸೂಚಿಸಿದರು.

ಕಡಬ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಹಾಗೂ ಕೊಕ್ಕಡ ಹೋಬಳಿಯ ಗ್ರಾಮಗಳನ್ನು ಸೇರಿಸುವ ಕುರಿತೂ ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ಳಲು ಸಚಿವ ರಮಾನಾಥ ರೈ ತಿಳಿಸಿದರು.

ಮೂಡಬಿದ್ರೆ ಹಾಗೂ ಕಡಬ ತಾಲೂಕು ಕಚೇರಿಗಳಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸೂಕ್ತ ಜಮೀನು ಕೂಡಲೇ ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಯೋಜನೆ ತಯಾರಿಸಿ ಸಲ್ಲಿಸಲು ಸಚಿವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಶಾಸಕ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಕಡಬ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News