ಅ. 2: ಜನ ಜಾಗೃತಿ ಸಮಾವೇಶ, ಪಾನಮುಕ್ತರ ಅಭಿನಂದನಾ ಸಮಾರಂಭ
ಬೆಳ್ತಂಗಡಿ, ಸೆ. 27: ಮಹಾತ್ಮಾ ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ಅ. 2 ರಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸುತ್ತಿದೆ. ಆ ಪ್ರಯುಕ್ತ ಬೆಳ್ತಂಗಡಿಯ ಶ್ರೀ ಧ.ಮಂ.ಕಲಾಭವನದಲ್ಲಿ ಜನ ಜಾಗೃತಿ ಸಮಾವೇಶ ಮತ್ತು ಪಾನಮುಕ್ತರ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಹೇಳಿದರು.
ಅವರು, ಬುಧವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಮಾರಂಭದ ವಿವರ ನೀಡಿದರು. ಧ.ಗ್ರಾ.ಯೋಜನೆ ಹಾಗೂ ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೊದಲಿಗೆ ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ಪೋಲಿಸ್ ಮೈದಾನದಿಂದ ವಾಹನ ಜಾಥಾ ನಡೆಯಲಿದೆ. ಬಳಿಕ ಕಲಾಭವನದಲ್ಲಿ ಶ್ರೀ ಧ. ಮಂ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ ಬಿ. ಯಶೋವರ್ಮ ಸಮಾ ವೇಶವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮುಖ್ಯ ಭಾಷಣ ಮಾಡಲಿದ್ದಾರೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಜೆಡಿಎಸ್ ತಾಲೂಕಾಧ್ಯಕ್ಷ ಪ್ರವೀಣಚಂದ್ರ ಜೈನ್ ಅತಿಥಿಗಳಾಗಿರುತ್ತಾರೆ ಎಂದರು.
ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ವಿವಿಧ ಪಕ್ಷಗಳು ಪ್ರಣಾಳಿಕೆಗಳಲ್ಲಿ ರಾಜ್ಯವನ್ನು ಪಾನ ಮುಕ್ತವನ್ನಾಗಿ ಮಾಡುವ ವಿಚಾರವಿರಬೇಕು ಎಂಬ ಉದ್ದೇಶದಿಂದ ಮೂರು ಪಕ್ಷಗಳ ನಾಯಕರುಗಳನ್ನು ಅತಿಥಿಗಳಾಗಿ ಕರೆದಿದ್ದು ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಿದ್ದೇವೆ. ಒಟ್ಟು 2000 ಮಂದಿ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾಗವಹಿಸುವವರಿಗೆ ಶ್ವೇತ ವರ್ಣದ ವಸ್ತ್ರ ಸಂಹಿತೆಯನ್ನು ತಿಳಿಸಿ ಹೇಳಲಾಗಿದೆ ಎಂದರು. ಗೋಷ್ಠಿಯಲ್ಲಿ ವೇದಿಕೆಯ ತಾಲೂಕಾಧ್ಯಕ್ಷ ಬೇಬಿ ಚೆರಿಯನ್, ಶಿಬಿರಾಧಿಕಾರಿ ನಾಗೇಶ್, ರಾಜೇಶ್ ಇದ್ದರು.
ವೇದಿಕೆಯು ಇದುವರೆಗೆ ರಾಜ್ಯಾದ್ಯಂತ 1128 ಶಿಬಿರಗಳ ಮೂಲಕ 76349 ಮಂದಿಯ ಹಾಗೂ ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ 125 ಮದ್ಯ ವರ್ಜನ ಶಿಬಿರಗಳನ್ನು ನಡೆಸಿ 9627 ಮಂದಿಯನ್ನು ಮದ್ಯದಿಂದ ಮುಕ್ತಗೊಳಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 114 ಶಿಬಿರಗಳನ್ನು ನಡೆಸಿದುದರ ಪರಿಣಾಮ 5742 ಮಂದಿ ಮದ್ಯಪಾನವನ್ನು ತ್ಯಜಿಸಿದ್ದಾರೆ
-ಜಯಕರ ಶೆಟ್ಟಿ