×
Ad

"ಶಾಲಿನಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿ, ಅಳುವ ಶಬ್ಧ ಕೇಳಬಾರದೆಂದು ಹಾಡು ಹಾಕುತ್ತಾರೆ"

Update: 2017-09-27 19:11 IST

"ಕರ್ನಾಟಕದ ಹೆಣ್ಣುಮಕ್ಕಳೂ ಅಲ್ಲಿದ್ದಾರೆ"

ಕಲ್ಲಿಕೋಟೆ, ಸೆ.27: ತೃಪ್ಪುಣಿತ್ತುರದ ಘರ್‍ವಾಪ್ಸಿ ಯೋಗ ಕೇಂದ್ರದ ದೌರ್ಜನ್ಯಗಳ ಕತೆಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿದೆ. ಯೋಗಕೇಂದ್ರದಲ್ಲಿ ದೌರ್ಜನ್ಯಕ್ಕೊಳಗಾಗಿ ನಂತರ  ಅಲ್ಲಿಂದ ತಪ್ಪಿಸಿಕೊಂಡು ಬಂದ ಮತ್ತೋರ್ವ ಯುವತಿ ತಾನು ಅನುಭವಿಸಿದ ಹಿಂಸೆಯನ್ನು ವಿವರಿಸಿದ್ದಾಳೆ ಎಂದು ಮಲಯಾಳಂ ಟಿವಿ ವಾಹಿನಿ ಮೀಡಿಯಾ ಒನ್‍ ವರದಿ ಮಾಡಿದೆ.

ಯೋಗಕೇಂದ್ರದಲ್ಲಿ ಯುವತಿಯರ ಮೇಲೆ ದೌರ್ಜನ್ಯ ಎಸಗಲಾಗುತ್ತದೆ ಎಂದು ಯುವತಿ ತಿಳಿಸಿದ್ದಾಳೆ. “ಕೇಂದ್ರದಲ್ಲಿದ್ದ ಮಹಿಳೆಯರು ಕೂಡಾ ಹಲ್ಲೆ ನಡೆಸುತ್ತಿದ್ದರು. ಅಲ್ಲಿದ್ದ ಕರಾಟೆ ಅಧ್ಯಾಪಕರು ಯುವತಿಯರಿಗೆ ಹೊಡೆಯುತ್ತಿದ್ದರು. ನಾವು ಅಸೌಖ್ಯದಿಂದಿದ್ದರೆ ಚಿಕಿತ್ಸೆ ಕೊಡಿಸುತ್ತಿರಲಿಲ್ಲ. ಕೇಂದ್ರದ ಹಿಂಸೆ ತಡೆಯಲಾಗದೆ ಗೋಡೆ ಹಾರಿ ಪಾರಾದೆವು” ಎಂದು ಯುವತಿ ವಿವರಿಸಿದ್ದಾಳೆ ಎನ್ನಲಾಗಿದೆ.

ತನ್ನ ಜೊತೆ ಇನ್ನೋರ್ವ ಯುವತಿಯೂ ಅಲ್ಲಿಂದ ಪಾರಾಗಿದ್ದಾಳೆ.  ಶಾಲಿನಿಂದ ಕಟ್ಟಿಹಾಕಿ ಹೊಡೆಯಲಾಗುತ್ತಿತ್ತು. ಯುವತಿಯರು ಅಳುವ ಶಬ್ದ ಯೋಗ ಕೇಂದ್ರದ ಹತ್ತಿರದ ಮನೆಯವರಿಗೆ ಕೇಳಿಸಬಾರದೆಂದು ಹಾಡುಗಳನ್ನು ಹಾಕಲಾಗುತ್ತಿತ್ತು ಎಂದು ಯುವತಿ ಆರೋಪಿಸಿದ್ದಾಳೆ ಎನ್ನಲಾಗಿದೆ.

"ಶಾಲಿನ ನೆರವಿನಿಂದ ಯೋಗ ಕೇಂದ್ರದ ಗೋಡೆ ಹಾರಿ ಹೊರಗೆ ಬಂದೆವು. ಯೋಗ ಕೇಂದ್ರದ ಸಿಬ್ಬಂದಿ ಹುಡುಕುವಾಗ ಕಾಡಿನಲ್ಲಿ ಅಡಗಿಕೂತಿದ್ದೆವು. ರಾತ್ರಿ ವೇಳೆ ಟಾರ್ಚ್ ಬೆಳಕಿನಲ್ಲಿ ನಮ್ಮನ್ನು ಹುಡುಕುತ್ತಿರುವ ಯೋಗಕೇಂದ್ರದ ಸಿಬ್ಬಂದಿಯನ್ನು ಊರವರು ನೀವು ಏನನ್ನು ಹುಡುಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ತಮ್ಮದೊಂದು ಚಿನ್ನದ ಸರ ಕಳೆದು ಹೋಗಿದೆ, ಹುಡುಕುತ್ತಿದ್ದೇವೆ ಎಂದು ಅವರು ಊರಿನವರಿಗೆ ಹೇಳಿದರು. ನೀವು ಬೆಳಗ್ಗೆ ಹುಡುಕಿ ಎಂದು ಹೇಳಿದ್ದರಿಂದ ಅವರು ಮರಳಿಹೋದರು. ಕಾಡಿನಿಂದ ರಸ್ತೆಗೆ ತಲುಪಿ ಟ್ಯಾಕ್ಸಿಚಾಲಕನೊಬ್ಬನ ನೆರವಿನಲ್ಲಿ ಅಲ್ಲಿಂದ ಪಾರಾದೆವು” ಎಂದು ಯುವತಿ ವಿವರಿಸಿದ್ದಾಳೆ ಎಂದು ಮೀಡಿಯಾ ಒನ್ ವರದಿ ಮಾಡಿದೆ.

ಯೋಗ ಸೆಂಟರ್ ಒಟ್ಟು ಎರಡು ಕೇಂದ್ರಗಳನ್ನು ಹೊಂದಿದ್ದು, ಒಂದರಲ್ಲಿ 67 ಹೆಣ್ಣುಮಕ್ಕಳು ಮತ್ತು ಇನ್ನೊಂದರಲ್ಲಿ  ಕಡಿಮೆ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಇದ್ದಾರೆ. ಕರ್ನಾಟಕದ ಇಬ್ಬರು ಹೆಣ್ಣುಮಕ್ಕಳು ಕೂಡ ಅಲ್ಲಿದ್ದಾರೆ ಎಂದು ಯುವತಿ ಹೇಳಿದ್ದಾಳೆ ಎಂದು ವರದಿಯಾಗಿದೆ.

UPDATE: ಮೀಡಿಯಾ ಒನ್ ಚಾನೆಲ್ ನ ಯುಟ್ಯೂಬ್ ಚಾನೆಲ್ ನಿಂದ ಯುವತಿ ಹೇಳಿಕೆ ನೀಡಿದ್ದ ವಿಡಿಯೋವನ್ನು ಬುಧವಾರ ತಡರಾತ್ರಿ ತೆಗೆದುಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News