ಆರೋಪಿಗಳ ಸುಳಿವು ಪತ್ತೆ ಹಚ್ಚಿದ ವಿಶೇಷ ಪೊಲೀಸರ ತಂಡ
► ಗಾಯಾಳುಗಳು ಚೇತರಿಕೆ ► ಕೃತ್ಯಕ್ಕೆ ಬಳಸಿದ ವಾಹನ ವಶ
ಬಂಟ್ವಾಳ, ಸೆ.27: ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆ ಹಾಕುವಲ್ಲಿ ಜಂಟಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ಆರೋಪಿಗಳ ಸ್ಪಷ್ಟ ಸುಳಿವನ್ನು ಪಡೆದಿರುವ ಪೊಲೀಸ್ ತಂಡವು ಶೀಘ್ರ ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಆರೋಪಿಗಳ ಪತ್ತೆಗಾಗಿ ಡಿಸಿಐಬಿ, ಸಿಸಿಬಿ ಹಾಗೂ ಬಂಟ್ವಾಳ ಇನ್‌ಸ್ಪೆಕ್ಟರ್ ನೇತೃತ್ವದ ಮೂರು ತಂಡವನ್ನು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ರಚಿಸಿದ್ದರು. ಕೃತ್ಯದ ಬಳಿಕ ಹಂತಕರು ಕಾಸರಗೋಡು ಮೂಲಕ ಕೇರಳಕ್ಕೆ ಪರಾರಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿರುವ ತಂಡವು ಆರೋಪಿಗಳ ಬಂಧನ ಕಾರ್ಯಾಚರಣೆಗೆ ಬಲೆ ಬೀಸಿದೆ.
ಸೋಮವಾರ ರಾತ್ರಿ ಫರಂಗಿಪೇಟೆ ಪೊಲೀಸ್ ಹೊರಠಾಣೆಯ ಪಕ್ಕದಲ್ಲೇ ಅಡ್ಯಾರ್ ಕಣ್ಣೂರಿನ ನೌಫಲ್ ಸೇರಿದಂತೆ 7 ಮಂದಿಯ ತಂಡವು ಕಾರು ಹಾಗೂ ಪಿಕಪ್‌ನಲ್ಲಿ ಆಗಮಿಸಿ ಅಡ್ಯಾರ್‌ಕಟ್ಟೆಯ ಝಿಯಾ ಮತ್ತಾತನ ಸ್ನೇಹಿತರಿದ್ದ ಶಿಫ್ಟ್ ಕಾರನ್ನು ತಡೆದು ತಲವಾರು ದಾಳಿ ನಡೆಸಿತ್ತು. ಇದರಿಂದ ಝಿಯಾ ಹಾಗೂ ಫಯಾಝ್ ಎಂಬವರು ಮೃತಪಟ್ಟಿದ್ದಾರೆ.
ಗಾಯಾಳುಗಳು ಚೇತರಿಕೆ
ಘಟನೆಯಲ್ಲಿ ಅನೀಸ್, ಮುಶ್ತಾಕ್, ಫಝಲ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ದಾಖ ಲಾಗಿದ್ದರು. ಇದೀಗ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಾಹನ ವಶ
ಹಂತಕರು ಕೃತ್ಯಕ್ಕೆ ಬಳಸಿದ್ದ ಪಿಕಪ್‌ಅನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವಾಹನ ಯಾರಿಗೆ ಸೇರಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.