ಕಾಲೇಜು ಸಿಬ್ಬಂದಿ ವರ್ಗಕ್ಕೆ ಅದಾಲತ್
ಮಂಗಳೂರು, ಸೆ.27: ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಖಾಸಗಿ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಸೇವಾ ಸಮಸ್ಯೆಗಳಿಗೆ ಸಂಬಂಧಿಸಿದ ಅದಾಲತ್ ಕಾರ್ಯಕ್ರಮ ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಪ್ರೊ. ಸೌಭಾಗ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಬೋಧಕ ಮತ್ತು ಬೋಧಕೇತರ ನೌಕರರ ಪದೋನ್ನತಿ, ವೇತನ ಭಡ್ತಿ ಇತ್ಯಾದಿ ಸೇವಾ ಸಮಸ್ಯೆಗಳಿಗೆ ಸಂಬಂಧಿಸಿದ ಸುಮಾರು 40 ಅಹವಾಲುಗಳು ಈ ಅದಾಲತ್‌ನಲ್ಲಿ ದಾಖಲಾಗಿದ್ದು, ಅವುಗಳಲ್ಲಿ ಕೆಲವುಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಲಾಯಿತು. ಉಳಿದವುಗಳಿಗೆ ಕೇಂದ್ರ ಕಚೇರಿಯ ಮುಖಾಂತರ ಪರಿಹಾರ ಕಂಡುಕೊಳ್ಳಲು ನಿರ್ಣಯಿಸಲಾಯಿತು.
ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಶಿಲ್ಪ, ಹೆಚ್ಚುವರಿ ನಿರ್ದೇಶಕ ಪ್ರೊ.ಎಂ.ಕೆ ನಾಯಕ, ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಉದಯಶಂಕರ್ ಹೆಚ್, ಪ್ರೊ. ರಾಜಶೇಖರ್ ಹೆಬ್ಬಾರ್ ಸಿ., ಪ್ರಾಂಶುಪಾಲ ಪಾಲಸಾಮಿ, ಪತ್ರಾಂಕಿತ ವ್ಯವಸ್ಥಾಪಕ ಎ. ಶ್ರೀಪತಿ ಉಡುಪ, ಕೇಂದ್ರ ಕಚೇರಿಯ ಅಧಿಕಾರಿ ರಘುಮಲ್ಲರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.