×
Ad

ಜೀವನದಲ್ಲಿ ಉತ್ತಮ ಕನಸಿನೊಂದಿಗೆ ಮುನ್ನಡಯಬೇಕು: ಡಾ.ನಾ.ದಾಮೋದರ್ ಶೆಟ್ಟಿ

Update: 2017-09-27 20:10 IST

ಕೊಣಾಜೆ, ಸೆ. 27: ನಾವು ಎಂದಿಗೂ ಪ್ರಶಸ್ತಿ, ಗೌರವಗಳಿಗಿಂತ ಮಿಗಿಲಾಗಿ ಯೋಚಿಸಿ ಜೀವನದಲ್ಲಿ ಬರುವ ನಾಳೆಗಳ ಬಗೆಗಿನ ಕನಸು ನಮ್ಮದಾಗಿಸಿ ಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ನಾ.ದಾಮೋದರ್ ಶೆಟ್ಟಿ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ 38ನೆ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಮಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪ್ರಶಸ್ತಿ, ಸನ್ಮಾನಗಳು ನಾವು ಮಾಡುವ ಕೆಲಸ ಬೆಳೆಯುತ್ತಿದ್ದಂತೆ ಸಿಗುವ ಗೌರವಗಳಾಗಿದ್ದು ವಿದ್ಯಾರ್ಥಿಗಳೂ ಕೂಡಾ ಇದಕ್ಕೆ ಮಿಗಿಲಾಗಿ ಬೆಳೆದು ಜೀವನ ದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರು ಮಾತನಾಡಿ, ಜೀವನ ಎಂಬುದು ಒಂದೇ ಬಾರಿ ನಮಗೆ ಸಿಗುವುದರಿಂದ ಫ್ಯಾಶನ್ ಹೆಸರಲ್ಲಿ ಹಾಳು ಮಾಡುವ ಬದಲು ದೊಡ್ಡ ಕನಸಿನೊಂದಿಗೆ ಮುನ್ನಡೆಯಬೇಕಿದೆ. ತಮ್ಮ ಮಕ್ಕಳು ಐಎಎಸ್, ಐಪಿಎಸ್, ವೈದ್ಯ, ಇಂಜಿನಿಯರ್ ಆಗಬೇಕು ಎನ್ನುವ ಒಂದೆರೆಡು ಕೆಲಸಗಳ ಬಗ್ಗೆಯೇ ಹೆತ್ತವರು ಚಿಂತಿಸುತ್ತಾರೆ. ಇದರ ಪರಿಣಾಮವಾಗಿ ಕಲೆ, ಕ್ರೀಡೆ ಸಹಿತ ಇತರ ಕ್ಷೇತ್ರಗಳಲ್ಲಿ ಪ್ರೋತ್ಸಾಹದ ಕೊರತೆ ಇದೆ ಎಂದು ಅಭಿಪ್ರಾಯಪಟ್ಟರು.

ಸಣ್ಣ ಹಳ್ಳಿ, ಬಡ ಕುಟುಂಬದಲ್ಲಿ ಹುಟ್ಟಿದ ನಾನು ಸಣ್ಣವನಿದ್ದಾಗ ಮೊಬೈಲ್, ವಾಟ್ಸಾಪ್, ಫೇಸ್‌ಬುಕ್‌ಗಳು ಇಲ್ಲದ ಕಾರಣ ಇಂದು ಸಾಧನೆ ಮಾಡಲು ಸಾಧ್ಯವಾಯಿತು. ಪದವಿ ಬಳಿಕ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡಿದ್ದು, ಆರು ವರ್ಷಗಳ ಬಳಿಕ ಒಬ್ಬಂಟಿಯಾಗಿ ಕುಳಿತು ತನ್ನಲ್ಲಿರುವ ಕಲೆಯ ಬಗ್ಗೆ ಚಿಂತಿಸಿ ಸಾಧನೆ ಮಾಡಬೇಕೆಂದು ಯೋಚಿಸಿದೆ. ಒಂದು ವರ್ಷ ತನಗೆ ಸಿಕ್ಕ ವೇತನವನ್ನು ಕೇವಲ ಬಣ್ಣಕ್ಕಾಗಿಯೇ ವ್ಯಯಿಸಿದ್ದು, ಆ ಸಂದರ್ಭ ಹೊಸ ವಸ್ತ್ರವನ್ನೂ ತೊಡಿಲಿಲ್ಲ, ಫ್ಯಾಶನ್‌ನತ್ತ ಮುಖವನ್ನೂ ಮಾಡಿಲ್ಲ. ಒಬ್ಬಂಟಿಯಾಗಿ ಯೋಚಿಸಿದಾಗ ಜೀವನಕ್ಕೊಂದು ತಿರುವು ಸಿಗುವುದರಲ್ಲಿ ಅನುಮಾನವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಲೇಖಕ ಡಾ.ನಾ.ದಾಮೋದರ್ ಶೆಟ್ಟಿ, ಚಲನಚಿತ್ರ ನಟಿ ವಿನಯ ಪ್ರಸಾದ್, ನಿರ್ದೇಶಕ ರಾಮಚಂದ್ರ ಪಿ.ಎನ್, ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ರಿಯೋ ಒಲಿಂಪಿಯನ್ ಪಟು ಅಯ್ಯ ಧಾರುಣ್ ಹಾಗೂ ಅಂತರಾಷ್ಟ್ರೀಯ ಕಲಾವಿದ ವಿಲಾಸ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.ನವದೆಹಲಿ ಎಸ್‌ಎಸ್‌ಪಿಎಲ್ ಡಿಆರ್‌ಡಿಓ ರಕ್ಷಣಾ ಮಂತ್ರಾಲಯದ ನಿರ್ದೇಶಕ ಡಾ.ರಾಜೇಶ್ ಕೆ.ಶರ್ಮಾ ವಿಶೇಷ ಉಪನ್ಯಾಸ ನೀಡಿದರು. ಸಂಗೀತ ನಿರ್ದೇಶಕ ಗುರುಕಿರಣ್ ವಿವಿಯ ಸ್ತುತಿಗೀತೆ ಬಿಡುಗಡೆಗೊಳಿಸಿದರು.ಮಂಗಳುರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಸ್ವಾಗತಿಸಿದರು. ಡಾ.ರಾಜಶ್ರೀ, ಪ್ರೊ.ಶಿವರಾಮ ಶೆಟ್ಟಿ, ಸಿ.ಕೆ.ಕಿಶೋರ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಪ್ರೊ.ರವಿಶಂಕರ್ ಹಾಗೂ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News