ಸುಲಿಗೆ ಪ್ರಕರಣ: ಇಕ್ಬಾಲ್ ಕಸ್ಕರ್‌ಗೆ 4 ದಿನ ಪೊಲೀಸ್ ಕಸ್ಟಡಿ
ಥಾಣೆ, ಸೆ.27: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್ ಹಾಗೂ ಇತರ ಇಬ್ಬರಿಗೆ ಥಾಣೆ ನ್ಯಾಯಾಲಯ ನಾಲ್ಕು ದಿನದ ಪೊಲೀಸ್ ಕಸ್ಟಡಿ ವಿಧಿಸಿದೆ.
ಮಹಾರಾಷ್ಟ್ರದ ಪ್ರಮುಖ ಬಿಲ್ಡರ್ ಒಬ್ಬರಿಂದ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಕಸ್ಕರ್ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಹಣ ಚಲುವೆ ಪ್ರಕರಣ ದಾಖಲಿಸಿಕೊಂಡಿತ್ತು.
ಕಸ್ಕರ್ ಮತ್ತಾತನ ಸಹಚರರಾದ ಇಸ್ರಾರ್ ಸೈಯದ್ ಮತ್ತು ಮುಮ್ತಾಝ್ ಶೇಖ್ ಸೇರಿಕೊಂಡು 2013ರಿಂದ ಥಾಣೆಯ ಪ್ರಮುಖ ಬಿಲ್ಡರ್ ಓರ್ವರನ್ನು ಬೆದರಿಸಿ, ಅವರಿಂದ 30 ಲಕ್ಷ ನಗದು ಹಾಗೂ 4 ಫ್ಲಾಟ್‌ಗಳನ್ನು ವಸೂಲಿ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಹಣ ಚಲುವೆ ತಡೆ ಕಾಯ್ದೆ(ಪಿಎಂಎಲ್‌ಎ)ಯನ್ವಯ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು , ಇವರು ಕ್ರಿಮಿನಲ್ ಕೃತ್ಯಗಳಿಂದ ಗಳಿಸಿರುವ ಆದಾಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಿಎಂಎಲ್‌ಎ ಕಾಯ್ದೆಯಡಿ ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.