ಪ್ರವಾಸೋದ್ಯಮದಲ್ಲಿ ಕೇರಳ ನಮಗೆ ಮಾದರಿಯಾಗಲಿ: ಸೊರಕೆ

Update: 2017-09-27 15:10 GMT

ಉಡುಪಿ, ಸೆ.27: ನಮ್ಮ ಪಕ್ಕದ ಕೇರಳ ರಾಜ್ಯ ಅತೀ ಕಡಿಮೆ ಅವಧಿಯಲ್ಲಿ ಪ್ರವಾಸೋದ್ಯಮದಲ್ಲಿ ಮುಂಚೂಣಿಕೆಗೆ ಬಂದಿತ್ತು. ಅದೀಗ ದೇಶದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ರಾಜ್ಯವಾಗಿದೆ. ಅದೇ ಮಾದರಿಯಲ್ಲಿ ನಾವು ಪ್ರವಾಸೋದ್ಯಮದ ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡು ಸುಸ್ಥಿರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗಳು ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಕೇಂದ್ರ, ನಿರ್ಮಿತಿ ಕೇಂದ್ರ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹಾಗೂ ಕರಾವಳಿ ಪ್ರವಾಸೋದ್ಯಮಗಳ ಸಂಘಟನೆ (ಎಸಿಟಿ) ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲಭರಿತ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಇವುಗಳನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಂಡರೆ, ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ಕಾರಣೀಭೂತವಾಗಲಿದೆ ಎಂಬುದನ್ನು ತಾವು ಲೋಕಸಭಾ ಸದಸ್ಯರಾಗಿದ್ದಾಗಲೇ ಅರಿತು ಅನುಷ್ಠಾನಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಟೂರಿಸಂ ಕಾರಿಡಾರ್ ರಚನೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲು ಕಾರ್ಯಪಡೆ ರಚಿಸಲಾಗಿತ್ತು ಎಂದರು.

ಕೇರಳದಂತೆ ಕರಾವಳಿಯಲ್ಲೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ. ಇದಕ್ಕಾಗಿ ಇಲ್ಲಿನ ಬೀಚ್ ಟೂರಿಸಂ, ಟೆಂಪಲ್ ಟೂರಿಸಂನೊಂದಿಗೆ ಆಯುರ್ವೇದ ಹಾಗೂ ಗ್ರಾಮೀಣ ಟೂರಿಸಂನ್ನು ಸಹ ಅಭಿವೃದ್ಧಿ ಪಡಿಸಬೇಕು. ಇದಕ್ಕಾಗಿ ಏರ್‌ಬಸ್ ಬರುವಂತಾಗಲು ಬಜೆಪಿಯ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಬೇಕು ಎಂದರು.

ಸೊರಕೆ ಅವರು ಪ್ರವಾಸೋದ್ಯಮ ಇಲಾಖೆ ನವೀಕರಿಸಿದ ವೆಬ್‌ಸೈಟ್‌ನ ಅನಾವರಣಗೊಳಿಸಿದರಲ್ಲದೇ, ಉಡುಪಿ ಪ್ರವಾಸೋದ್ಯಮ ಆ್ಯಪ್‌ನ್ನು ಬಿಡುಗಡೆಗೊಳಿಸಿದರು. ಅಲ್ಲದೇ ಪ್ರವಾಸೋದ್ಯಮ ಕುರಿತ ರೇಡಿಯೊ ಜಿಂಗಲ್ಸ್ ಹಾಗೂ ತುಣುಕು ದೃಶ್ಯಗಳನ್ನು ಸಹ ಬಿಡುಗಡೆಗೊಳಿಸಿದರು.

ಸಮುದಾಯ ಮುಂದೆ ಬರಲಿ: ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಎಲ್ಲಾ ಅವಕಾಶಗಳಿದ್ದು, ಇದಕ್ಕಾಗಿ ಸಮಾಜ ಹಾಗೂ ಸಮುದಾಯವೂ ಕೈಜೋಡಿಸಬೇಕಾಗಿದೆ. ಇಲಾಖೆ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಂಘಟನೆಗಳೊಂದಿಗೆ ಈ ಬಾರಿ ಸ್ಥಳೀಯ ಸಮುದಾಯವನ್ನು ಒಳಗೊಳಿಸುವ ಯೋಜನೆಯನ್ನು ರೂಪಿಸಿ ಅದನ್ನು ಕಲ್ಯಾಣಪುರ ಸಮೀಪದ ಮೂಡುಕುದ್ರುವಿನಲ್ಲಿ ಗ್ರಾಪಂ ಹಾಗೂ ಸ್ವಸಹಾಯ ಗುಂಪುಗಳ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಪ್ರವಾಸಿ ತಾಣಗಳ ಸಂರಕ್ಷಣೆ ಹಾಗೂ ಆಕರ್ಷಣೆಗೊಳಿಸುವಲ್ಲಿ ಸಮುದಾಯ ಇಲಾಖೆಯೊಂದಿಗೆ ಕೈಜೋಡಿಸಬೇಕಾಗುತ್ತದೆ. ಇಲ್ಲದಿದ್ದರೆ ಇದು ಸಾಧ್ಯವಾಗ ದು. ಇಂದು ಬಿಡುಗಡೆಗೊಳಿಸಿದ ಪ್ರವಾಸೋದ್ಯಮ ಆ್ಯಪ್ ಪ್ರವಾಸಿಗರಿಗೆ ಬೇಕಾದ ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡುತ್ತದೆ ಎಂದು ಪ್ರಿಯಾಂಕ ಹೇಳಿದರು.

ಕಾರ್ಯಕ್ರಮವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಪಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಎಸ್ಪಿ ಡಾ.ಸಂಜೀವ ಎಂ.ಪಾಟೀಲ್, ವಿವಿಧ ಸಂಘಟನೆಗಳ ಮನೋಹರ ಶೆಟ್ಟಿ, ಯತೀಶ್ ಬೈಕಂಪಾಡಿ, ಗಂಗಾಧರ ಹೆಗ್ಡೆ, ಪ್ರೊ.ಪರ್ವತವರ್ಧಿನಿ ಉಪಸ್ಥಿತರಿದ್ದರು.

ಡಾ.ವಿಜಯೇಂದ್ರ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್. ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಗಣೇಶ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News