ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ: ಅಪರಾಧಿಗೆ ಕಠಿಣ ಶಿಕ್ಷೆ
ಉಡುಪಿ, ಸೆ.27: ಎರಡು ವರ್ಷಗಳ ಹಿಂದೆ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಂದು ಕಠಿಣ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದ ತಿಮ್ಮ(36) ಶಿಕ್ಷೆಗೆ ಗುರಿಯಾದ ಅಪರಾಧಿ ಎಂದು ಗುರುತಿಸಲಾಗಿದೆ. 2015ರ ಎ.23ರಂದು ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ ಎಂಟು ಮತ್ತು ಒಂಭತ್ತು ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳನ್ನು ಮಾವಿನ ಹಣ್ಣು ಕೊಡಿಸುವುದಾಗಿ ಹೇಳಿ ಹಾಡಿಗೆ ಕರೆದುಕೊಂಡ ಹೋದ ತಿಮ್ಮ ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದನು.
ಈ ವಿಷಯವನ್ನು ಮಕ್ಕಳು ಮನೆಯವರಲ್ಲಿ ತಿಳಿಸಿದ್ದು, ಅದರಂತೆ ಇಬ್ಬರನ್ನು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಪೊಕ್ಸೋ ಕಾಯಿದೆಯಡಿ ಕುಂದಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಎ. 24ರಂದು ಆರೋಪಿ ತಿಮ್ಮನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ತಿಮ್ಮ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಪೊಕ್ಸೋ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು 17 ಸಾಕ್ಷಿಗಳ ಹೇಳಿಕೆ ಪಡೆದಿತ್ತು. ವಿಚಾರಣೆಯಲ್ಲಿ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಭಾ.ದಂ.ಸಂ. ಕಲಂ376ರ ಪ್ರಕಾರ 7ವರ್ಷ ಶಿಕ್ಷೆ ಮತ್ತು 10ಸಾವಿರ ರೂ. ದಂಡ ಹಾಗೂ ಪೊಕ್ಸೋ ಸೆಕ್ಷನ್ 6ರ ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಮತ್ತು 10ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರಕಾರದ ಪರವಾಗಿ ಜಿಲ್ಲಾ ವಿಶೇಷ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.