×
Ad

ಜೈಲು ಆವರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಸೆರೆ

Update: 2017-09-27 21:42 IST

ಮಂಗಳೂರು, ಸೆ. 27: ನಗರದ ಕೊಡಿಯಾಲ್‌ಬೈಲ್‌ನಲ್ಲಿ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿ ಆರೋಪದಲ್ಲಿ ಪುತ್ತೂರು ಮುಕ್ರಂಪಾಡಿಯ ರವಿ ಕುಮಾರ್ (28) ಎಂಬಾತನನ್ನು ಬುಧವಾರ ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 2,800 ರೂ. ಬೆಲೆಯ 115 ಗ್ರಾಂ ಗಾಂಜಾ ಮತ್ತು 1,000 ರೂ. ಬೆಲೆಯ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಾಗೃಹದ ಬಳಿ ಸುಳಿದಾಡುತ್ತಿದ್ದ ಈತನನ್ನು ಸಂಶಯದಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಇದನ್ನು ತಾನು ಮಾರಾಟ ಮಾಡಲು ತಂದಿರುವುದಾಗಿ ಆರೋಪಿ ರವಿ ಕುಮಾರ್ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈತ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದೇ ಅಥವಾ ಜೈಲಿನ ಆವರಣ ಗೋಡೆಯ ಮೇಲ್ಭಾಗದಿಂದ ಜೈಲಿನ ಒಳಗೆ ಎಸೆಯಲು ಮುಂದಾಗಿದ್ದನೇ ಎನ್ನುವ ಬಗ್ಗೆ ಪೊಲೀಸರಿಗೆ ಸಂದೇಹವಿದೆ. ಗಾಂಜಾವನ್ನು ಕೇರಳದ ಗಡಿ ತಲಪಾಡಿಯಿಂದ ತಂದಿರುವುದಾಗಿ ಆರೋಪಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಹಳೆ ಪ್ರಕರಣದ ಆರೋಪಿಯಾಗಿರುವ ಈತ 17 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ 2 ಕಳವು ಪ್ರಕರಣ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಕಳವು ಕೇಸು, ಮಂಗಳೂರಿನ ಬಂದರು ಮತ್ತು ಬರ್ಕೆ ಠಾಣೆಗಳಲ್ಲಿ ತಲಾ 1 ಹಲ್ಲೆ ಪ್ರಕರಣ, ಕದ್ರಿ ಠಾಣೆಯಲ್ಲಿ ಗಾಂಜಾ ಪ್ರಕರಣವಿದೆ. ಅಲ್ಲದೆ ಕೆಲವು ವರ್ಷಗಳ ಹಿಂದೆ ವಿಚಾರಣಾಧೀನ ಕೈದಿಗಳಿಗೆ ಹೊರಗಿನಿಂದ ಬಿರಿಯಾನಿ ಪೂರೈಕೆ ಮಾಡಿದ ಸಂದರ್ಭ ಜೈಲಿನಲ್ಲಿ ರಶೀದ್ ಮಲ್ಬಾರಿ ಮತ್ತು ಇನ್ನೊಂದು ತಂಡದ ಮಧ್ಯೆ ನಡೆದ ಹೊಡದಾಟ ಪ್ರಕರಣದಲ್ಲಿ ಈತ ಭಾಗಿಯಾಗಿದ್ದನೆಂದು ಹೇಳಲಾಗಿದೆ.

ಎಸಿಪಿ ಉದಯ ನಾಯಕ್ ಮತ್ತು ಬರ್ಕೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಸ್ಸೈ ನರೆಂದ್ರ, ಎಸ್ಸೈ ಪ್ರಕಾಶ್, ಎಚ್‌ಸಿ ಕಿಶೋರ್ ಕುಮಾರ್ ಮತ್ತು ಕಾನ್‌ಟೇಬಲ್ ನಾಗರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News