ಸೆ.29: ಇಂಡಿಯಾನ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನ
ಮಂಗಳೂರು, ಸೆ.27: ವಿಶ್ವ ಹೃದಯ ದಿನದ ಅಂಗವಾಗಿ ನಗರದ ಇಂಡಿಯಾನ ಆಸ್ಪತ್ರೆಯ ವತಿಯಿಂದ ಸೆ.29ರಂದು ವಿಶ್ವ ಹೃದಯ ದಿನ ಆಚರಿಸಲಾಗುವುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹೃದಯ ತಜ್ಞ ಡಾ. ಯೂಸುಫ್ ಕುಂಬ್ಳೆ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಬುಧವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಆಕಸ್ಮಿಕವಾಗಿ ಸಂಭವಿಸುವ ಹೃದಯಾಘಾತವನ್ನು ಹೇಗೆ ತಡಗಟ್ಟುವುದು ಮತ್ತು ಹೃದಯಾಘಾತಗೊಂಡ ವ್ಯಕ್ತಿಯನ್ನು ಹೇಗೆ ರಕ್ಷಿಸುವುದು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೆ ಇಂಡಿಯಾನ ಆಸ್ಪತ್ರೆಯಲ್ಲಿ ಅಂದು ನೋಂದಣಿ ಮಾಡಿದ ಹೃದಯ ಸಂಬಂಧಿ ರೋಗಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ತಪಾಸಣೆ ನಡೆಸಲಾಗುವುದು ಎಂದರು.
ವಿಶ್ವ ಹೃದಯ ಒಕ್ಕೂಟವು 2000ರಲ್ಲಿ ವಿಶ್ವ ಹೃದಯ ದಿನವನ್ನು ಸೆಪ್ಟಂಬರ್ ಕೊನೆಯ ರವಿವಾರ ಆಚರಿಸಲು ಆರಂಭಿಸಿತು. 2011ರಿಂದ ವರ್ಷಂಪ್ರತಿ ಸೆ.29ರಂದು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಹೃದಯ ಕಾಯಿಲೆಯಿಂದಾಗಿ ಸಂಭವಿಸುವ ಅವಧಿಪೂರ್ವ ಸಾವಿನ ಬಗ್ಗೆ ಮತ್ತು ಅಪಾಯಕಾರಿ ಅಂಶಗಳಾದ ತಂಬಾಕು ಸೇವನೆ, ದೈಹಿಕ ಚಟುವಟಿಕೆ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಆಲ್ಕೋಹಾಲ್ ಸೇವನೆಯಂತಹ ಚಟಗಳ ಬಗ್ಗೆಯೂ ಈ ಸಂದರ್ಭ ಜನಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಡಾ. ಯೂಸುಫ್ ಕುಂಬ್ಳೆ ನುಡಿದರು.