100ನೆ ವಿಕೆಟ್ ಪಡೆದ ಉಮೇಶ್ ಯಾದವ್

Update: 2017-09-28 13:48 GMT

ಬೆಂಗಳೂರು, ಸೆ.28: ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ 100ನೆ ವಿಕೆಟ್ ಪಡೆದಿದ್ದಾರೆ.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದಲ್ಲಿ ಉಮೇಶ್ ಯಾದವ್ ಅವರು ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವುದರೊಂದಿಗೆ 100 ವಿಕೆಟ್ ಪಡೆದ ಸಾಧನೆ ಮಾಡಿದರು.

ಉಮೇಶ್ ಯಾದವ್ ಎಸೆತದಲ್ಲಿ ಸ್ಮಿತ್ ಅವರು ಕೆಟ್ಟ ಹೊಡೆತಕ್ಕೆ ಯತ್ನಿಸಿ ಮಿಡ್ ವಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ನಾಯಕ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಮೊದಲ ಬಾರಿ ಆಡಿದ್ದ ಉಮೇಶ್ ಯಾದವ್ ಅವರು ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್‌ಗೆ ಶತಕ ನಿರಾಕರಿಸಿದರು. ಟ್ರಾವಿಸ್ ಹೆಡ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ ವಿಕೆಟ್ ಉಡಾಯಿಸಿದ ಉಮೇಶ್ ಯಾದವ್ 10 ಓವರ್‌ಗಳಲ್ಲಿ 71ಕ್ಕೆ 4 ವಿಕೆಟ್ ಪಡೆದರು.

71ನೆ ಏಕದಿನ ಪಂದ್ಯವನ್ನಾಡಿದ ಉಮೇಶ್ ಯಾದವ್ ಯಶಸ್ವಿ ಬೌಲರ್ ಎನಿಸಿಕೊಂಡರು.

ಉಮೇಶ್ ಯಾದವ್ 100ಕ್ಕಿಂತ ಅಧಿಕ ವಿಕೆಟ್ ಪಡೆದ ಭಾರತದ 17ನೆ ಬೌಲರ್ ಹಾಗೂ 9ನೆ ಭಾರತದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಜಾವಗಲ್ ಶ್ರೀನಾಥ್ 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್ ಪಡೆದು ಭಾರತದ ಪರ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್.

 ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ ಕುಮಾರ್ ಆಸ್ಟ್ರೇಲಿಯ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ 3-0 ಅಂತರದಲ್ಲಿ ಸರಣಿ ಗೆಲ್ಲಲು ನೆರವಾಗಿದ್ದರು. ಇವರಿಗೆ ವಿಶ್ರಾಂತಿ ನೀಡಿ ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ ಅವರಿಗೆ ಅವಕಾಶ ನೀಡಲಾಗಿತ್ತು. ಉಮೇಶ ಯಾದವ್ ಯಶಸ್ವಿಯಾದರು. ಆದರೆ ಶಮಿ 10 ಓವರ್‌ಗಳಲ್ಲಿ 62 ರನ್ ನೀಡಿದ್ದರೂ ವಿಕೆಟ್ ಪಡೆಯದೆ ಕೈಸುಟ್ಟುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News