​ವಿಶ್ವವಿಖ್ಯಾತ ದಸರಾ ಕವಿಗೋಷ್ಠಿ ಯಲ್ಲಿ ತುಳು, ಬ್ಯಾರಿ, ಕೊಂಕಣಿ ಕವನವಾಚನ

Update: 2017-09-28 14:05 GMT

ಮಂಗಳೂರು, ಸೆ. 28: ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾದಲ್ಲಿ ಜರಗಿದ 'ವಿಖ್ಯಾತ ಕವಿಗೋಷ್ಠಿ'ಯಲ್ಲಿ ಈ ಬಾರಿ ರಾಜ್ಯದ ಪ್ರತಿ ಜಿಲ್ಲೆಗೆ ಒಬ್ಬರಂತೆ ಒಟ್ಟು ಮೂವತ್ತು ಕವಿಗಳು ಹಾಗೂ ಸಹವರ್ತಿ ಭಾಷೆಗಳಿಂದ ಐದು ಕವಿಗಳು ಸೇರಿದಂತೆ ಒಟ್ಟು ಮೂವತ್ತೈದು ಕವಿಗಳು ಭಾಗವಹಿಸಿದರು.

ಇದರಲ್ಲಿ ಕರಾವಳಿ ಭಾಗದ ಮೂವರು ಕವಿಗಳು ಪ್ರಸ್ತುತ ಪಡಿಸಿದ ತುಳು,ಬ್ಯಾರಿ ಮತ್ತು ಕೊಂಕಣಿ ಭಾಷೆಯ ಕವಿತಾವಾಚನ ಪ್ರೇಕ್ಷಕರ ಗಮನ ಸೆಳೆಯಿತು. ಸ. 27ರಂದು ಪೂರ್ವಾಹ್ನ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಜರಗಿದ ಈ ದಸರಾ ಕವಿಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಲೇಖಕ,ಪ್ರಾಧ್ಯಾಪಕ ಭಾಸ್ಕರ ರೈ ಕುಕ್ಕುವಳ್ಳಿ ಅವರು 'ತುಳುವಪ್ಪೆಡ ಸುಲೆಕೊ'ಎಂಬ ತುಳು ಕವನ ವಾಚಿಸಿದರು. ತುಳುನಾಡು,ನುಡಿಗಳ ಪ್ರಾಚೀನತೆ, ಪರಂಪರೆ  ಮತ್ತು ವರ್ತಮಾನದ ಸ್ಥಿತಿ - ಗತಿಗಳನ್ನು ಕವಿತೆಯಲ್ಲಿ ಕಟ್ಟಿಕೊಟ್ಟ ಅವರು  ಅದರ ಕನ್ನಡ ಅವತರಣಿಕೆಯನ್ನೂ ಪ್ರಸ್ತುತಪಡಿಸಿದರು.

ಬಹುಭಾಷಾ ಕವಿ  ಮಹಮ್ಮದ್ ಬಡ್ಡೂರು 'ಏದ್ ಪಾಟ್ ..'ಬ್ಯಾರಿ ಕವನವನ್ನು ರಾಗಬದ್ಧವಾಗಿ ಹಾಡಿ ಮಾನವೀಯತೆಯ ಹುಡುಕಾಟದಲ್ಲಿ ಭ್ರಮನಿರಸನ ಗೊಂಡ ಬಗೆಯನ್ನು ವಿವರಿಸಿದರು. ಲೇಖಕ ,ಪತ್ರಕರ್ತ ಮೆಲ್ವಿನ್ ರಾಡ್ರಿಗಸ್ 'ಕಾರ್ಮಿಕರ ಕನವರಿಕೆ' ಕೊಂಕಣಿ ಕವಿತೆಯಲ್ಲಿ ತಾನು ಕೊಲ್ಲಿದೇಶದಲ್ಲಿದ್ದಾಗ ಅಲ್ಲಿ ಕಂಡ ಭಾರತೀಯ ಕಾರ್ಮಿಕರ ದಾರುಣ ಪರಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸಿದರು.ಕವಯಿತ್ರಿ ಅನುರಾಧ ಪಿ.ಸಾಮಗ ಮತ್ತು ರಂಗಾಯಣ ಕಲಾವಿದೆ ಕು.ಜಯಶ್ರೀ ಇಡ್ಕಿದು ಕನ್ನಡ ಕವನದ ಮೂಲಕ ಉಡುಪಿ ಹಾಗೂ ದ.ಕ.ಜಿಲ್ಲೆಗಳನ್ನು ಪ್ರತಿನಿಧಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ಧರಾಮಯ್ಯ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಡಾ.ಮಲ್ಲಿಕಾ ಘಂಟಿ ಮತ್ತು ಖ್ಯಾತ ಕವಿ,ಗೀತ ರಚನಕಾರ ಜಯಂತ ಕಾಯ್ಕಿಣಿ ಮುಖ್ಯ ಅತಿಥಿಗಳಾಗಿದ್ದರು.

ಭಾಗವಹಿಸಿದ ಎಲ್ಲಾ ಕವಿಗಳನ್ನು ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಮೈಸೂರು ಪೇಟ ತೊಡಿಸಿ,ಶಾಲು-ಸ್ಮರಣಿಕೆ ನೀಡಿ ಸನ್ಮಾನಿಸಲಾಯ್ತು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಡಾ.ಬಿ.ಕೆ.ಎಸ್.ವರ್ಧನ್, ಡಾ.ಎನ್.ಕೆ.ಲೋಲಾಕ್ಷಿ, ಮಂಜುನಾಥ್ ಬಿ. ಮತ್ತು ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News