ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರಕ್ಕೆ ಸಮಗ್ರ ವ್ಯವಸ್ಥೆಯ ಕೊರತೆ:ಸುಪ್ರೀಂ ಅಸಮಾಧಾನ
ಹೊಸದಿಲ್ಲಿ,ಸೆ.28:ದೇಶದಲ್ಲಿ ಲೈಂಗಿಕ ದೌರ್ಜನ್ಯಗಳ ಬಲಿಪಶುಗಳಿಗೆ ಪರಿಹಾರ ವಿತರಣೆಗಾಗಿ ಸಮಗ್ರ ವ್ಯವಸ್ಥೆಯೊಂದರ ಕೊರತೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಸಂತ್ರಸ್ತ ಮಹಿಳೆಯರಿಗೆ ಪರಿಹಾರ ಪಾವತಿಸಿದ್ದರೆ ಅದರ ದಾಖಲೆಗಳನ್ನೇಕೆ ಇಟ್ಟಿಲ್ಲ ಮತ್ತು ಹಣವನ್ನು ಯಾವ ಹಂತದಲ್ಲಿ ಪಾವತಿಸಬೇಕು ಎನ್ನುವುದನ್ನೇಕೆ ನಿರ್ಧರಿಸಿಲ್ಲ ಎಂದೂ ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ ಗುಪ್ತಾ ಅವರ ಪೀಠವು ಅಚ್ಚರಿ ವ್ಯಕ್ತಪಡಿಸಿತು.
ಇದೊಂದು ಅಧ್ವಾನದ ಸ್ಥಿತಿಯಾಗಿದೆ. ಬಲಿಪಶುಗಳು ಈಗಾಗಲೇ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದವರೇ ಆಗಿದ್ದಾರೆ ಹೊರತು ಬೇರೆ ಯಾರೂ ಅಲ್ಲ ಎಂದ ನ್ಯಾಯಾಲಯವು, ಈ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಸಮಗ್ರ ವ್ಯವಸ್ಥೆಯು ಕಂಡುಬರುತ್ತಿಲ್ಲ. ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಹಣಕಾಸನ್ನು ಹಸ್ತಾಂತರಿ ಸುತ್ತಿದೆ, ಆದರೆ ಸಂತ್ರಸ್ತರಿಗೆ ಹಣ ಪಾವತಿಯಾಗುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿತು.
ಲೈಂಗಿಕ ದೌರ್ಜನ್ಯಗಳ ಸಂತ್ರಸ್ತರಿಗೆ ಪರಿಹಾರ ಪಾವತಿಯ ಸಮಗ್ರ ವ್ಯವಸ್ಥೆಯೊಂದನ್ನು ಹೇಗೆ ರೂಪಿಸಬಹುದು ಎಂಬ ಬಗ್ಗೆ ನೆರವಾಗುವಂತೆ ಕೇಂದ್ರದ ಪರ ಹಿರಿಯ ನ್ಯಾಯವಾದಿ ಎ.ಕೆ ಪಂಡಾ ಅವರಿಗೆ ನ್ಯಾಯಾಲಯವು ಸೂಚಿಸಿತು. ಸಂತ್ರಸ್ತರ ಪುನರ್ವಸತಿಗೆ ಅಥವಾ ಕನಿಷ್ಠ ಅವರ ಬವಣೆಯನ್ನಾದರೂ ಕಡಿಮೆಗೊಳಿಸಲು ಅಗತ್ಯ ವಾಗಿರುವ ಕ್ರಮಗಳ ಬಗ್ಗೆ ಸರಕಾರದ ಅಭಿಪ್ರಾಯಗಳನ್ನೂ ಅದು ಬಯಸಿತು.