ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ತೈಲೋತ್ಪನ್ನ ಮಾರಾಟ : ಧರ್ಮೇಂದ್ರ ಪ್ರಧಾನ್

Update: 2017-09-28 15:24 GMT

 ಹೊಸದಿಲ್ಲಿ, ಸೆ.28: ಆನ್‌ಲೈನ್ ಮೂಲಕ ತೈಲೋತ್ಪನ್ನಗಳನ್ನು ಮಾರಾಟ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಶೀಘ್ರ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ದಿಲ್ಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಲಾಗಿರುವ ವಿಶ್ವ ಅಂತರ್ಜಾಲ ಮತ್ತು ತಂತ್ರಜ್ಞಾನ ಸಮಾವೇಶ ‘ಇಂಡಿಯ ಮೊಬೈಲ್ ಕಾಂಗ್ರೆಸ್’ನಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು ಇ-ಕಾಮರ್ಸ್ ವೇದಿಕೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟಕ್ಕಿಡಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು. ದೇಶದಲ್ಲಿ ಸುಮಾರು 4 ಕೋಟಿ ತೈಲೋತ್ಪನ್ನ ಗ್ರಾಹಕರಿದ್ದರೆ ಕೇವಲ 1 ಲಕ್ಷ ಚಿಲ್ಲರೆ ಮಾರಾಟ ಕೇಂದ್ರವಿದೆ. ಆದ್ದರಿಂದ ಆನ್‌ಲೈನ್ ಮೂಲಕ ಗ್ರಾಹಕರ ಮನೆಬಾಗಿಲಿಗೇ ತೈಲ ಪೂರೈಸುವ ಯೋಜನೆ ಜಾರಿಗೆ ತರುವ ಕುರಿತು ಶೀಘ್ರ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು ತಿಳಿಸಿದರು.

 ಈ ಹಿಂದೆ ಬೆಂಗಳೂರು ಮೂಲದ ಸಂಸ್ಥೆಯೊಂದು ಗ್ರಾಹಕರ ಮನೆಬಾಗಿಲಿಗೇ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುವ ವ್ಯವಹಾರ ಆರಂಭಿಸಿತ್ತು. ಆದರೆ ಇದು ಅಕ್ರಮ ಎಂದು ಪರಿಗಣಿಸಿ ಪೆಟ್ರೋಲಿಯಂ ಮತ್ತು ಸುರಕ್ಷಾ ಸಂಘಟನೆ(ಪಿಇಎಸ್‌ಒ) ಈ ವ್ಯವಹಾರ ಮುಂದುವರಿಸದಂತೆ ಸೂಚನೆ ನೀಡಿತ್ತು. ಇಂತಹ ವ್ಯವಹಾರ ನಡೆಸಲು ತಾನು ಯಾರಿಗೂ ಅನುಮತಿ ನೀಡಿಲ್ಲ ಎಂದು ಪಿಇಎಸ್‌ಒ ಸ್ಪಷ್ಟನೆ ನೀಡಿತ್ತು.

ಸರಿಯಾದ ಕಾರ್ಯನೀತಿ ಹೊಂದಿರುವ ಮುಕ್ತ ವ್ಯಾಪಾರ ವ್ಯವಸ್ಥೆಯು ಯಾವಾಗಲೂ ಗ್ರಾಹಕರ ಹಿತಾಸಕ್ತಿಗೆ ಪೂರಕವಾಗಿರುತ್ತದೆ ಎಂಬ ಭರವಸೆಯನ್ನು ಟೆಲಿಕಾಂ ಕ್ರಾಂತಿ ಹುಟ್ಟುಹಾಕಿದೆ ಎಂದು ಬುಧವಾರ ಸಚಿವ ಪ್ರಧಾನ್ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News