×
Ad

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ: ಜಿಲ್ಲಾಧಿಕಾರಿ

Update: 2017-09-28 21:08 IST

 ಮಣಿಪಾಲ, ಸೆ.28: ಜಿಲ್ಲೆಯಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಗುರುವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಉಡುಪಿ ನಗರಸಭೆಯಲ್ಲೂ ಈ ಅನುದಾನ ಸದ್ಬಳಕೆಯಾಗಿಲ್ಲ ಎಂದು ಮುಖಂಡರಾದ ಉದಯ ತಲ್ಲೂರು, ಸುಂದರ ಮಾಸ್ತರ್ ಮುಂತಾದವರು ದೂರಿದರು. ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ, ಸಂಬಂದಪಟ್ಟವರ ವಿರುದ್ದ ದೂರು ದಾಖಲಿಸಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ನೀಡುವಂತೆ ಹಾಗೂ ಡಿಸಿ ಮನ್ನಾ ಭೂಮಿಯನ್ನು ಗುರುತಿಸಿ, ಅತಿಕ್ರಮಣವಾಗಿದ್ದಲ್ಲಿ ತೆರವುಗೊಳಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿ, ಹಂಚಿಕೆ ಮಾಡುವ ಕುರಿತಂತೆ ಕುಂದಾಪುರದಲ್ಲಿ ರಚಿಸಲಾಗಿರುವ ಸಮಿತಿಯ ಆಯ್ಕೆ ಸರಿಯಾಗಿಲ್ಲ. ಸಮಿತಿಯಲ್ಲಿ ಡಿಸಿ ಮನ್ನಾ ಭೂಮಿ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದವರೂ ಇದ್ದಾರೆ ಎಂದು ಹಲವು ದಲಿತ ಮುಖಂಡರು ದೂರಿದರು. ಈ ಕುರಿತಂತೆ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಹಲವು ಗ್ರಾಪಂಗಳಲ್ಲಿ ಕ್ರಿಯಾ ಯೋಜನೆಯಲ್ಲಿ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣ ಮೀಸಲಿಟ್ಟಿರುವ ಹಣದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಅವಕಾಶ ವಿದ್ದರೂ ಗ್ರಾಪಂಗಳು ನೀಡುತ್ತಿಲ್ಲ. ಸರಕಾರದ ಸ್ಪಷ್ಟ ಆದೇಶವಿದ್ದರೂ ಪಾಲನೆ ಯಾಗುತ್ತಿಲ್ಲ. ವಿವಾಹ ಮತ್ತು ಮರಣ ಸಂದರ್ಭದಲ್ಲಿ ತುರ್ತು ಸಹಾಯಧನ ನೀಡುವ ಸೌಲ್ಯವಿದ್ದರೂ ಅದನ್ನು ನೀಡುತ್ತಿಲ್ಲ ಎಂದು ಮುಖಂಡ ರಮೇಶ್ ಕೋಟ್ಯಾನ್ ದೂರಿದರು. ಈ ಕುರಿತು ಜಿಲ್ಲೆಯ ಎಲ್ಲಾ ಗ್ರಾಪಂಗಳ ಸಭೆ ನಡೆಸಿ, ಸೂಚನೆ ನೀಡಿ ಎಂದು ಜಿಪಂ ಸಿಇಓ ಅವರಿಗೆ ಡಿಸಿ ಸೂಚಿಸಿದರು.

ಹಂಗಾರಕಟ್ಟೆಯ ಮೀನು ಕಟ್ಟಿಂಗ್ ಕಾರ್ಖಾನೆಯ ಲೈಸೆನ್ಸ್ ರದ್ದಾಗಿದ್ದರೂ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಂಜುನಾಥ ಬಾಳ್ಕುದ್ರು ಆಕ್ಷೇಪಿಸಿದರು. ಈ ಕುರಿತು ಪರಿಶೀಲನೆ ನಡೆಸುವಂತೆ ಕುಂದಾಪುರ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದ ಡಿಸಿ, ದೇವಲ್ಕುಂದದಲ್ಲಿ ಮೀನು ಕಟ್ಟಿಂಗ್ ಪ್ಯಾಕ್ಟರಿಯಿಂದ ಹರಿಯುವ ನೀರು ದಲಿತರ ಬಾವಿಗೆ ಹೋಗುತ್ತಿದ್ದು, ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ; ಕೂಡಲೇ ಕ್ರಮ ಕೈ ಗೊಳ್ಳುವಂತೆ ಮುಖಂಡರುಗಳು ಕೋರಿದರು. ಕೂಡಲೇ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿ ವರದಿ ನೀಡಿ ಎಂದು ಕುಂದಾಪುರ ತಾಪಂ ಇಓಗೆ ಪ್ರಿಯಾಂಕ ಸೂಚಿಸಿದರು.

ತಲ್ಲೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಯನ್ನು ಒಳಗುತ್ತಿಗೆ ನೀಡಿದ್ದಾರೆ. ಯಡ್ತರೆಯಲ್ಲಿ ನಿರ್ಮಾಣವಾಗಿರುವ ಭವನ ಕಾಮಗಾರಿ ಕಳಪೆಯಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈ ಗೊಳ್ಳುವಂತೆ ಉದಯ ತಲ್ಲೂರು ತಿಳಿಸಿದರು. ಜಿಲ್ಲೆಯಲ್ಲಿ ನಿರ್ಮಾಣ ಗೊಂಡಿರುವ ಅಂಬೇಡ್ಕರ್ ಭವನಗಳ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಕಂದಾವರದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆ ಇದ್ದರೂ ಅಲ್ಲಿ ಬಾರ್ ಕಾರ್ಯ ನಿರ್ವಹಿಸುತ್ತಿದೆ ಇದರಿಂದ ಸಮೀಪದಲ್ಲಿರುವ ದಲಿತ ಕುಟುಂಬಗಳಿಗೆ ತೊಂದರೆಯಾಗಿದೆ. ತಡೆ ಇದ್ದರೂ ಬಾರ್ ನಡೆಯುತ್ತಿರುವ ಕುರಿತು ಕ್ರಮಕೈಗೊಳ್ಳುವಂತೆ ಕೃಷ್ಣ ಎಂಬವರು ದೂರಿದರು. ಈ ಕುರಿತಂತೆ ತಾಪಂನಿಂದ, ಸ್ಥಳೀಯ ಗ್ರಾಪಂನಿಂದ ಹಾಗೂ ಅಬಕಾರಿ ಇಲಾಖೆಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.

ಕಾರ್ಕಳದ ನೂರಾಲ್‌ಬೆಟ್ಟುನಲ್ಲಿ ಮಲೆ ಕುಡಿಯ ಜನಾಂಗದವರ ರಸ್ತೆ ಅತಿಕ್ರಮಣ ನಡೆಯುತ್ತಿದೆ. ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನೇಶ್ ಎಂಬುವರನ್ನು 4 ತಿಂಗಳ ವೇತನ ನೀಡದೇ ವಿನ ಕಾರಣ ಕೆಲಸದಿಂದ ತೆಗೆಯಲಾಗಿದೆ.ಅರಣ್ಯ ಹಕ್ಕು ಕಾಯ್ದೆಯಡಿ ಸೌಲ್ಯಗಳು ಸಹ ದೊರೆಯುತ್ತಿಲ್ಲ ಎಂದು ದಲಿತ ಮುಖಂಡ ಶ್ರೀಧರ್ ತಿಳಿಸಿದರು.

ಬೋವಿ ಜನಾಂಗದಿಂದ ಜಾತಿ ಪ್ರಮಾಣ ಪತ್ರ ದುರುಪಯೋಗ, ಗ್ರಾಪಂ ಗಳಲ್ಲಿ ಅಂಗಡಿಕೋಣೆಯ ಹಂಚಿಕೆಯಲ್ಲಿ ಮೀಸಲು ನೀಡದಿರುವುದು, ಕಾರ್ಕಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಮರ್ಪಕ ಸೇವೆ ನೀಡದಿರುವುದು, ಉಚ್ಚಿಲ ರುದ್ರಭೂಮಿ ಕಾಮಗಾರಿ ನಿಲುಗಡೆ, ಮರಳುಗಾರಿಕೆಯಲ್ಲಿ ಪ.ಜಾತಿ ಪಂಗಡದವರಿಗೆ ಮೀಸಲಾತಿ ನೀಡುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.

ಅ.4ಕ್ಕೆ ಸಭೆ: ಜಿಲ್ಲೆಯಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಮಗಾರಿಯಲ್ಲಿ ನಡೆದಿ ರುವ ಅವ್ಯವಹಾರಗಳ ಬಗ್ಗೆ ಹಾಗೂ ದಲಿತರ ಜನಾಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅ.4ರಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಪ್ರತ್ಯೇಕ ಸಭೆ ನಡೆಯಲಿದ್ದು, ಲಿಖಿತ ರೂಪದಲ್ಲಿ ದೂರುಗಳನ್ನು ಸಲ್ಲಿಸುವಂತೆ ನಾಗರಿಕ ಹಕ್ಕುಜಾರಿ ನಿರ್ದೇಶನಾಲಯದ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ ಪಾಟೀಲ್, ಸಹಾಯಕ ಆಯುಕ್ತೆ ಶಿಲ್ಪಾನಾಗ್, ಜಿಪಂ ಸಿಇಓ ಶಿವಾನಂದ ಕಾಪಶಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿ ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News