ಸಾಮರಸ್ಯದ ಬದುಕು ನಮ್ಮದಾಗಲಿ: ಡಾ.ಜಿ.ಪರಮೇಶ್ವರ್
ಮಂಗಳೂರು, ಸೆ.28: ಸಮಾನತೆಯಿಂದ ಬದುಕುವುದು ಎಲ್ಲ ಧರ್ಮಗಳ ಆಶಯವಾಗಿದೆ. ಆದರೆ ಹಿಂದೂ ಧರ್ಮದಲ್ಲಿ ಇನ್ನೂ ಜಾತಿ ತಾರತಮ್ಯ ಇದೆ. ಹಾಗಾಗಿ ಈ ಜಾತಿ, ಧರ್ಮದ ಭೇದ ಮರೆತು ಸಾಮರಸ್ಯದ ಬದುಕು ನಮ್ಮದಾಗಬೇಕು. ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ದಸರಾ ಉತ್ಸವವು ಪ್ರೇರಣೆಯಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ಮಂಗಳೂರು ದಸರಾ -2017 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಜಗತ್ತು ಬದಲಾವಣೆ ಬಯಸುತ್ತಿದೆ. ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಧರ್ಮಗಳ ಮಧ್ಯೆ ಒಡಕು ಮೂಡಿಸುವು ದರಿಂದ ಅಶಾಂತಿ ಹಬ್ಬುತ್ತಿದೆ. ಹಾಗಾಗಿ ಧರ್ಮಗಳ ಸಾರವನ್ನು ಅರಿತು ಬಾಳಲು ಮುಂದಾಗಬೇಕು. ಹಾಗಾದರೆ ಮಾತ್ರ ಶಾಂತಿಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಡಾ.ಜಿ. ಪರಮೇಶ್ವರ್ ನುಡಿದರು. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಪ್ರಸ್ತಾವನೆಗೈದರು. ಕ್ಷೇತ್ರಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಯ.ಸಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಸಚಿವ ಯು.ಟಿ. ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಜೆ.ಆರ್. ಲೋಬೊ, ಮೊಯ್ದಿನ್ ಬಾವಾ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ಮಂಗಳೂರು ತಾಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಬೆಳ್ತಂಗಡಿ, ಟ್ರಸ್ಟಿಗಳಾದ ಬಿ.ಕೆ. ತಾರಾನಾಥ್, ರವಿಶಂಕರ ಮಿಜಾರ್, ಕೆ.ಮಹೇಶ್ಚಂದ್ರ, ಶ್ರೀ ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ದೇವೇಂದ್ರ ಕುಮಾರ್, ಡಿ.ಡಿ.ಕಟ್ಟೆಮಾರ್, ಎಂ.ಶೇಖರ ಪೂಜಾರಿ, ಡಾ.ಬಿ.ಜಿ.ಸುವರ್ಣ, ದೇವೇಂದ್ರ ಪೂಜಾರಿ, ಎಂ.ವೇದಕುಮಾರ್, ಚಿತ್ರ ನಟ ರಾಜಶೇಖರ್ ಕೋಟ್ಯಾನ್ ಉಪಸ್ಥಿತರಿದ್ದರು. ಪದ್ಮರಾಜ್ ಆರ್. ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.