ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಅಪಾಯದಲ್ಲಿ: ಡಾ.ವಾನಳ್ಳಿ
ಉಡುಪಿ, ಸೆ.28: ದೇಶದಲ್ಲಿ ಇಂದು ಅಭಿವ್ಯಕ್ತಿ ಸ್ವಾತಂತ್ರ ಎಂಬುದು ಸಮಾಜ ಘಾತುಕರ ಕೈ ಸಿಕ್ಕಿ ನಲುಗುತ್ತಿದೆ. ದೇಶದ ಎಲ್ಲ ಕಡೆಗಳಲ್ಲಿ ಕಾಣುತ್ತಿ ರುವ ಹಿಂಸೆಗಳು ಅಭಿವ್ಯಕ್ತಿಗೆ ಮಾರಕವಾಗಿವೆ ಎಂದು ಹಿರಿಯ ಪತ್ರಕರ್ತ ಹಾಗೂ ಬರಹಗಾರ ಡಾ.ನಿರಂಜನ ವಾನಳ್ಳಿ ಮೈಸೂರು ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠ ಆಶ್ರಯದಲ್ಲಿ ನವ ರಾತ್ರಿಯ ಪ್ರಯುಕ್ತ ರಾಜಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಅಭಿವ್ಯಕ್ತಿಯ ಅಂತರಂಗ’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಅಭಿವ್ಯಕ್ತಿ ಸ್ವಾತಂತ್ರ ಎಂಬುದು ನಮ್ಮ ಸಂವಿಧಾನದಲ್ಲಿ ಅಂತರಗತವಾಗಿದೆ. ಆದರೆ ಇಂದು ನಾವು ಬರೆಯುವ ಹಾಗೂ ಹೇಳುವ ಎಲ್ಲ ಅಭಿವ್ಯಕ್ತಿಯ ಮೇಲೆಯೂ ಒಂದು ರೀತಿಯ ಭಯೋತ್ಪಾದನೆಯ ನೆರಳು ಇದ್ದೇ ಇರುತ್ತದೆ. ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯ ಎಷ್ಟು ಸ್ವತಂತ್ರ ಎಂಬ ಪ್ರಶ್ನೆ ಹಿಂದೆಂದಿಕ್ಕಿಂತಲೂ ಇಂದು ತುಂಬಾ ಕಾಡುತ್ತಿದೆ ಎಂದರು.
ಸಮಾಜ ವಿರೋಧಿ ಶಕ್ತಿಗಳು ಒಡ್ಡುವ ಬೆದರಿಕೆಗಳು ನಮ್ಮ ಅಭಿವ್ಯಕ್ತಿಗೆ ಎಚ್ಚರಿಕೆಯ ಗಂಟೆಗಳಾಗಿವೆ. ನಮಗೆ ಅನಿಸಿದ್ದನ್ನು ನಿರ್ಭೀತವಾಗಿ ಹೇಳುವ, ಬರೆಯುವ ಕಾಲ ಬರಬೇಕು. ಅಭಿವ್ಯಕ್ತಿ ಎಂಬುದು ಭಾವನೆಗಳ ಮೊತ್ತವಾಗ ಬೇಕೇ ಹೊರತು ಪ್ರಚಾರಕ್ಕಾಗಿ ಬಳಕೆಯಾಗಬಾರದೆಂದು ಅವರು ತಿಳಿಸಿದರು.
ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವ ಚನ ನೀಡಿ, ಅಭಿವ್ಯಕ್ತಿಯನ್ನು ವೈಚಾರಿಕತೆಯ ಮೂಲಕ ಎದುರಿಸುವ ಬದಲು ಹಿಂಸೆಗೆ ಇಳಿಯುವ ಅತ್ಯಂತ ಕೆಟ್ಟ ಪ್ರವೃತ್ತಿ ದೇಶದಲ್ಲಿ ನಡೆಯುತ್ತಿದೆ. ಎಲ್ಲರೂ ಸತ್ಯಾಸತ್ಯತೆಯನ್ನು ಯಾವುದೇ ಅಳುಕಿಲ್ಲದೆ ನಿಸ್ಸಂಕೋಚವಾಗಿ ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕಲ್ಕೂರ ಉಪಸ್ಥಿತರಿದ್ದರು.
ಇತ್ತೀಚೆಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆಯಿತು. ಅವರ ನಿಲುವು ಗಳನ್ನು ಒಪ್ಪುವುದು ಬಿಡುವುದು ಬೇರೆ ಪ್ರಶ್ನೆ. ಆದರೆ ಆಕೆಗೆ ಬದುಕುವ ಹಕ್ಕು ಇದೆ. ಹೇಳುವ ಸ್ವಾತಂತ್ರ ಇದೆ. ಅದನ್ನು ಕಿತ್ತುಕೊಳ್ಳಲು ನಾವು ಯಾರು. ಒಬ್ಬ ಅಮಾಯಕ ಹೆಣ್ಣುಮಗಳನ್ನು ಗುಂಡು ಹೊಡೆದು ಕೊಂದಿರುವುದು ಮನುಷ್ಯತ್ವವೇ? ಎಂದು ಹಿರಿಯ ಪತ್ರಕರ್ತ ನಿರಂಜನ ವಾನಹಳ್ಳಿ ಪ್ರಶ್ನಿಸಿದರು.