ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್: ಶಿರೂರು ಶಾಖೆಯಲ್ಲಿ ಎಟಿಎಮ್ ಉದ್ಘಾಟನೆ, ಗ್ರಾಹಕ ಸಮಾವೇಶ
ಭಟ್ಕಳ, ಸೆ. 28: ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಶಿರೂರು ಶಾಖೆಯಲ್ಲಿ ಅಳವಡಿಸಿದ ಎಟಿಎಮ್ ನ್ನು ಬ್ಯಾಂಕಿನ ಅಧ್ಯಕ್ಷ ಅಬ್ದುಲ ಮಜೀದ್ ಚೌಗುಲೆ ಉದ್ಘಾಟಿಸಿದರು ನಂತರ ಗ್ರಾಹಕ ಸಮಾವೇಶವು ನೆರವೇರಿತು.
ಎಟಿಎಮ್ ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ತತ್ವದ ಅಡಿಪಾಯದಡಿ ಈ ಊರಿನ ಅತೀ ಸಮೀಪದ, ಉತ್ತರ ಕನ್ನಡ ಜಿಲ್ಲೆಯ ಭಟಕಳದಲ್ಲಿ ಆರಂಭಗೊಂಡ ಈ ಬ್ಯಾಂಕು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಖೆಗಳನ್ನು ತೆರೆದು ಪ್ರಗತಿ ಪಥದತ್ತ ದಾಪುಗಾಲಿಡುತ್ತಾ ಮುನ್ನೆಡೆದಿದೆ, ಬ್ಯಾಂಕು ಇಂದು ಹೊಸ ಹೊಸ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲು ನನಗೆ ಅತೀವ ಹೆಮ್ಮೆ ಎನಿಸುತ್ತಿದೆ ಎಂದರು.
ಬ್ಯಾಂಕಿನ ಪ್ರಗತಿಯ ಅಂಕಿ ಅಂಶಗಳನ್ನು ಗ್ರಾಹಕರಿಗೆ ತಿಳಿಸಿ ಪ್ರಾಸ್ತಾವಿಕ ಮಾತನಾಡಿದ ಬ್ಯಾಂಕಿನ ಪ್ರಧಾನ ಕಾರ್ಯನಿರ್ವಾಹಕ ಎಸ್.ಎ.ರಝಾಕ್ ಸರಿ ಸುಮಾರು 25 ವರ್ಷಗಳ ಹಿಂದೇ ಬ್ಯಾಂಕಿಂಗ್ ವ್ಯವಹಾರದಲ್ಲಿ ಕಂಪ್ಯೂಟರ್ ಅಳವಡಿಸಿ ಸಂಪೂರ್ಣ ಗಣಕೀಕೃತಗೊಂಡ ಸಹಕಾರಿ ಬ್ಯಾಂಕ್ ಎಂಬ ಪ್ರಶಂಸೆಗೆ ಪಾತ್ರವಾದ ಈ ನಮ್ಮ ಬ್ಯಾಂಕು ಇಂದು ಸಕಲ ಬ್ಯಾಂಕಿಂಗ್ ಸೌಲಭ್ಯವನ್ನು ಬ್ಯಾಂಕಿನ ಗ್ರಾಹಕರಿಗೆ ನೀಡುವುದರ ಮೂಲಕ ಮನೆಮಾತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಟಿಎಮ್ ಉದ್ಘಾಟನೆಯ ನಂತರ ನಡೆದ ಗ್ರಾಹಕ ಸಮಾವೇಶದಲ್ಲಿ ಉಪಸ್ಥಿತರಿದ್ದ ಗ್ರಾಹಕರು ಬ್ಯಾಂಕು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸ್ತುತ ಹೊಸ ತಂತ್ರಜ್ಞಾನದ ಬ್ಯಾಂಕಿಂಗ್ ವ್ಯವಹಾರದ ಕುರಿತು ಕೇಳಿ ತಿಳಿದುಕೊಂಡರು.
ಬ್ಯಾಂಕಿನ ವೃತ್ತಿಪರ ನಿರ್ದೇಶಕ ಪರಿ ಮಹ್ಮದ್ ಹುಸೇನ್ ಸ್ವಾಗತಿಸಿದರು. ಬ್ಯಾಂಕಿನ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಸುಭಾಷ ಎಮ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬ್ಯಾಂಕಿನ ಶಿರೂರು ಶಾಖೆಯ ವ್ಯವಸ್ಥಾಪಕ ಆರ್.ಎಮ್. ಇಸ್ಮಾಯಿಲ್ ವಂದಿಸಿದರು. ಬ್ಯಾಂಕಿನ ನಿರ್ದೇಶಕ ಮಂಡಳಿ, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.