ಮೀಸೆ ಬೆಳೆಸಿದ್ದಕ್ಕಾಗಿ ದಲಿತ ಯುವಕನ ಮೇಲೆ ಹಲ್ಲೆ

Update: 2017-09-29 07:07 GMT

ಅಹ್ಮದಾಬಾದ್, ಸೆ. 29: ದಲಿತ ಯುವಕ ಮೀಸೆ ಬೆಳೆಸಿದ್ದಾನೆ ಎಂಬ ಕಾರಣಕ್ಕೆ ಮೇಲ್ವರ್ಗದ ಮಂದಿ ಆತನ ಮೇಲೆ ಹಲ್ಲೆ ನಡೆಸಿರುವ ವಿಚಿತ್ರ ಘಟನೆ ರಾಜಧಾನಿ ಗಾಂಧಿನಗರದಿಂದ ಕೇವಲ 15 ಕಿಲೋಮೀಟರ್ ದೂರದ ಹಳ್ಳಿಯಲ್ಲಿ ನಡೆದಿದೆ.

ದರ್ಬಾರ್ ಸಮುದಾಯಕ್ಕೆ ಸೇರಿದ ಮೂವರು ಪಿಯೂಶ್ ಪರ್ಮಾರ್ (24) ಎಂಬ ಯುವಕನನ್ನು ನಿಂದಿಸಿ, ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಗಾಂಧಿನಗರ ಜಿಲ್ಲೆ ಕಲೋಲ್ ತಾಲೂಕು ಲಿಂಬೋದರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಲಿತರು ಮೀಸೆ ಬೆಳೆಸುವುದನ್ನು ಇಲ್ಲಿನ ಪ್ರಬಲ ದರ್ಬಾರ್ ಸಮುದಾಯ ಸಹಿಸದೇ ಈ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.

ಮಯೂರ್‌ಸಿನ್ಹ ವಘೇಲಾ, ರಾಹುಲ್ ವಿಕ್ರಂಸಿನ್ಹ ಮತ್ತು ಅಜಿತ್‌ಸಿನ್ಹ ವಘೇಲಾ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಗಾಂಧಿನಗರದ  ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಪರ್ಮಾರ್ ತನ್ನ ಸಂಬಂಧಿ ದಿಗಂತ್ ಮಹೇರಿಯಾ ಜತೆ ಗಾರ್ಬಾ ಆಸ್ವಾದಿಸಿ ಹಳ್ಳಿಗೆ ವಾಪಾಸು ಬರುತ್ತಿದ್ದಾಗ ಜಾತಿ ನಿಂದನೆ ಮಾಡಿದರು. ಕತ್ತಲಿನಲ್ಲಿ ಯಾರು ಎಂದು ತಿಳಿಯಲಿಲ್ಲ. ಹತ್ತಿರಕ್ಕೆ ಹೋದಾಗ ದರ್ಬಾರ್ ಸಮುದಾಯದ ಮೂವರು ಯುವಕರು ಕಂಡುಬಂದರು. ಬಳಿಕ ಅವರು ಮನೆಗೆ ಬಂದು ದಿಗಂತ್ ಹಾಗೂ ನನ್ನ ಮೇಲೆ ಹಲ್ಲೆ ನಡೆಸಿ, ಮೀಸೆ ಬೆಳೆಸಿದ್ದು ಯಾಕೆ ಎಂದು ಪ್ರಶ್ನಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News