ಸೆ.30: ಮಂಗಳೂರು ದಸರಾ ಮೆರವಣಿಗೆ

Update: 2017-09-29 05:56 GMT

ಮಂಗಳೂರು, ಸೆ. 29: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ‘ಮಂಗಳೂರು ದಸರಾ’ದ ಮೆರವಣಿಗೆಯು ಸೆ.30ರಂದು ಸಂಜೆ ಶ್ರೀ ಕ್ಷೇತ್ರದ ರುವಾರಿ ಬಿ. ಜನಾರ್ದನ ಪೂಜಾರಿಯ ನೇತೃತ್ವದಲ್ಲಿ ನಡೆಯಲಿದೆ.

ಶಾರದಾಂಬೆಯ ಉತ್ಸವ ಮೂರ್ತಿಯೊಂದಿಗೆ ನವದುರ್ಗೆಯರು, ಗಣಪತಿ ವಿಗ್ರಹದ ಶೋಭಾಯಾತ್ರೆ ನಡೆಸಲಿದ್ದಾರೆ. ಸೆ.30ರಂದು ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರದಿಂದ ಹೊರಡುವ ಶೋಭಾ ಯಾತ್ರೆಯು ಮಣ್ಣಗುಡ್ಡ, ಲೇಡಿಹಿಲ್ ಸರ್ಕಲ್, ಪಿವಿಎಸ್ ಸರ್ಕಲ್, ನವಭಾರತ್ ಸರ್ಕಲ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ಸರಕಾರಿ ಕಾಲೇಜು ವೃತ್ತದಿಂದ ಹೈಸ್ಕೂಲ್ ರಸ್ತೆಯಾಗಿ ಶ್ರೀ ವೆಂಕರಮಣ ದೇಗುಲದ ಮುಂಭಾಗವಾಗಿ ಕಾರ್‌ಸ್ಟ್ರೀಟ್, ಅಳಕೆಯಾಗಿ ರವಿವಾರ ಮುಂಜಾನೆ  ಶ್ರೀ ಕ್ಷೇತ್ರದಲ್ಲಿ ಶಾರದಾ ವಿಸರ್ಜನೆ ಮಾಡಲಾಗುತ್ತದೆ.

ಕಣ್ತುಂಬುವ ಟ್ಯಾಬ್ಲೋಗಳು: ಈ ಮೆರವಣಿಗೆಯಲ್ಲಿ ಸುಮಾರು 60 ಟ್ಯಾಬ್ಲೋಗಳಿದ್ದು, ಇದು ದಸರಾ ಮೆರವಣಿಗೆಗೆ ಮೆರಗು ನೀಡಲಿದೆ. ವಿಭಿನ್ನ ಶೈಲಿಯ ಈ ಟ್ಯಾಬ್ಲೋಗಳು ಪ್ರೇಕ್ಷಕರ ಕಣ್ಣಿಗೆ ಹಬ್ಬ ನೀಡಲಿದೆ. ಶ್ರೀ ಕ್ಷೇತ್ರದಲ್ಲಿ 10 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ. ದಸರಾ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರವು ದೀಪಾಲಂಕಾರಗೊಂಡಿದೆ.

ಮೆರವಣಿಗೆ ಹೊರಡುವ ಸುಮಾರು 9 ಕಿ.ಮೀ. ಉದ್ದದ ರಸ್ತೆಯ ಇಕ್ಕಡೆಗಳು ಕೂಡ ದೀಪದಿಂದ ಅಲಂಕೃತಗೊಂಡಿದೆ. ಶ್ರೀ ಕ್ಷೇತ್ರದ ಮೂಲಗಳ ಪ್ರಕಾರ ಸುಮಾರು 20ಲಕ್ಷಕ್ಕೂ ಅಧಿಕ ಬಲ್ಬ್‌ಗಳನ್ನು ಬಳಸಲಾಗಿದೆ. ಅದಲ್ಲದೆ ಪ್ರಮುಖ ವೃತ್ತಗಳನ್ನು ವಿಶೇಷವಾಗಿ ಸಿಂಗರಿಸಲಾಗಿದೆ.

ವಾಹನ ಸಂಚಾರದಲ್ಲಿ ಮಾರ್ಪಾಡು: ದಸರಾ ಮೆರವಣಿಗೆಯ ಹಿನ್ನಲೆಯಲ್ಲಿ ನಗರದ ವಾಹನ ಸಂಚಾರದಲ್ಲೂ ಮಾರ್ಪಾಡು ಮಾಡಲಾಗಿದೆ. ಕೊಟ್ಟಾರ ಚೌಕಿ, ಬಜ್ಪೆ ಕಡೆಯಿಂದ ಆಗಮಿಸುವ ವಾಹನಗಳು ಕುಂಟಿಕಾನ, ಕೆಪಿಟಿ, ನಂತೂರಿನ ಮೂಲಕ ನಗರ ಪ್ರವೇಶಿಸಬೇಕು. ನಗರದಿಂದ ಬಜ್ಪೆ, ಉಡುಪಿ, ಕಾರ್ಕಳ ಕಡೆಗೆ ತೆರಳುವ ವಾಹನಗಳು ಬಂಟ್ಸ್ ಹಾಸ್ಟೆಲ್-ನಂತೂರು ಮೂಲಕ ತೆರಳಬೇಕು.

ಮೆರವಣಿಗೆ ಆರಂಭವಾದ ಮಳಿಗೆ ಜನಸಂದಣಿಯನ್ನು ಅವಲೋಕಿಸಿ ನ್ಯೂಚಿತ್ರಾದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್‌ನಿಂದ ಕಂಡತ್‌ಪಳ್ಳಿಗೆ, ಲೇಡಿಹಿಲ್‌ನಿಂದ ಕುದ್ರೋಳಿಗೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News